ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಕಲ ರೀತಿಯಲ್ಲಿಯೂ ಸನ್ನದ್ಧವಾಗಲು ಬಿಜೆಪಿ ಸಿದ್ಧತೆ ನಡೆಸಿದ್ದು, ಸರಣಿ ಸಭೆ ಮೂಲಕ ಮೂಲ ಮತ್ತು ವಲಸಿಗ ಶಾಸಕರ ಕ್ಷೇತ್ರಗಳಲ್ಲಿ ಸಮಸ್ಯೆ ಎದುರಾಗದ ರೀತಿ ಮುನ್ನೆಚ್ಚರಿಕೆ ವಹಿಸಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಪಾಲಿಕೆ ಫೈಟ್ ಅಖಾಡಕ್ಕೆ ದುಮುಕಲು ನಿರ್ಧರಿಸಿದ್ದು, ಯಾವುದೇ ಹಂತದಲ್ಲಿಯೂ ಸಮಸ್ಯೆ, ಗೊಂದಲ ಸೃಷ್ಟಿಯಾಗದಂತೆ ಈಗಿನಿಂದಲೇ ತಾಲೀಮು ಆರಂಭಿಸಿದೆ.
ಭವಿಷ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮೇಲೆ ಬಿಬಿಎಂಪಿ ಚುನಾವಣೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಹೀಗಾಗಿ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರೋ ಬಿಜೆಪಿ ಪಾಲಿಕೆ ಗದ್ದುಗೆ ಧಕ್ಕಿಸಿಕೊಳ್ಳಲು ಕಾರ್ಯಾಚರಣೆಗಿಳಿದಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಬಹುತೇಕ ಖಚಿತವಾಗಿದ್ದು, ಚುನಾವಣೆಗಾಗಿ ಸಕಲ ತಯಾರಿ ನಡೆಸಿಕೊಳ್ಳುತ್ತಿದೆ.
ಸುಪ್ರೀಂಕೋರ್ಟ್ ಸೂಚಿಸಿದ ಕೂಡಲೇ ಬಿಬಿಎಂಪಿ ಚುನಾವಣೆ: ಚುನಾವಣೆ ಘೋಷಣೆಗೂ ಮುನ್ನ ಬಿಬಿಎಂಪಿ ವ್ಯಾಪ್ತಿಯ ಶಾಸಕರು, ಸಂಸದರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿದೆ. ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ವಿಭಾಗದ ಚುನಾಯಿತ ಪ್ರತಿನಿಧಿಗಳು ಹಾಗು ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಸಕಲ ರೀತಿಯಲ್ಲೂ ವರ್ಕೌಟ್ ಆರಂಭಿಸಿದ್ದು, ಸುಪ್ರೀಂಕೋರ್ಟ್ ಸೂಚಿಸಿದ ಕೂಡಲೇ ಚುನಾವಣೆ ಮಾಡಲು ನಿರ್ಧಾರ ಕೈಗೊಂಡಿದೆ.
ಚುನಾವಣೆಗೂ ಮುನ್ನ ಅಭ್ಯರ್ಥಿ ಆಯ್ಕೆಗೆ ಮಾನದಂಡ: ಒಳ್ಳೆಯ ಮತ್ತು ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಪಾರದರ್ಶಕವಾಗಿ ರಾಜ್ಯದಿಂದಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಪ್ರತಿ ವಾರ್ಡ್ಗಳಿಗೆ ಹೋಗಿ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಪಟ್ಟಿ ಮಾಡಿ ಮಂಡಲದಲ್ಲಿ ನೀಡಬೇಕು. ಮಂಡಲದಲ್ಲಿ ಸ್ಕ್ರೀನಿಂಗ್ ಮಾಡಿ ನಿರ್ಧಾರ ಮಾಡಲಾಗುವುದು. ಆ ಪಟ್ಟಿಯನ್ನ ರಾಜ್ಯದ ಹೈಕಮಾಂಡ್‌ಗೆ ನೀಡುವುದು, ಈ ರೀತಿಯಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಫೆ.14-25ರವರೆಗೆ ಜಂಟಿ ಅಧಿವೇಶನ ಕರೆಯಲು ತೀರ್ಮಾನ: ಸಚಿವ ಮಾಧುಸ್ವಾಮಿ
50-50 ತಂತ್ರ: ಅಭ್ಯರ್ಥಿಗಳ ಆಯ್ಕೆಯಲ್ಲಿ ಶಾಸಕರಿಗೂ ಅವಕಾಶ ಕಲ್ಪಿಸಲಾಗಿದೆ. ವಲಸೆ ಶಾಸಕರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ. ಪಕ್ಷ, ಸರ್ಕಾರ ಬರಲು ಕಾರಣವಾಗಿರುವ ಹಿನ್ನೆಲೆ ಅವರಿಗೂ ಅವಕಾಶ ನೀಡಲು ನಿರ್ಧರಿಸಿದೆ. ಆದರೆ ಯಾವುದೇ ಶಾಸಕರು ನೇರವಾಗಿ ಯಾವುದೇ ಅಭ್ಯರ್ಥಿ ಹೆಸರು ಪ್ರಕಟಿಸುವಂತಿಲ್ಲ. ವಲಸೆ ಶಾಸಕರ ಭಾವನೆಗೂ ಬೆಲೆಕೊಡುವ ದೃಷ್ಟಿಯಿಂದ ಪಕ್ಷ ಮತ್ತು ವಲಸೆ ಶಾಸಕರ ಕ್ಷೇತ್ರದಲ್ಲಿ 50-50 ಅನುಪಾತದಲ್ಲಿ ಅಭ್ಯರ್ಥಿ ಆಯ್ಕೆಗೆ ನಿರ್ಧರಿಸಲಾಗಿದೆ.
ಸಚಿವರಾದ ಗೋಪಾಲಯ್ಯ, ಎಸ್.ಟಿ ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಕ್ಷೇತ್ರದಲ್ಲಿ 50:50 ಅನುಪಾತಕ್ಕೆ ಅವಕಾಶ ನೀಡಲಾಗಿದೆ. ವಲಸೆ ಶಾಸಕರೂ ಕೂಡ ಪ್ರತೀ ವಾರ್ಡಿಗೆ ಕನಿಷ್ಠ ಮೂರು ಜನರ ಹೆಸರು ಸೂಚಿಸಬೇಕು. ಒಬ್ಬರ ಹೆಸರನ್ನ ಫೈನಲ್ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಶಾಸಕರಿಗೆ ಟಾಸ್ಕ್: ತಕ್ಷಣದಿಂದಲೇ ಬೆಂಗಳೂರು ವ್ಯಾಪ್ತಿಯ ಎಲ್ಲಾ ಬಿಜೆಪಿ ಶಾಸಕರು ಅವರ ಕ್ಷೇತ್ರಕ್ಕೆ ಸಂಬಂಧಿಸಿದ ವಾರ್ಡ್ ಗಳಿಗೆ ತೆರಳಿ ಜನರ ಕುಂದು ಕೊರತೆ ಆಲಿಸಲು ಮುಂದಾಗುವಂತೆ ಸೂಚನೆ ನೀಡಲಾಗಿದೆ. ವಾರ್ಡ್ ವಾರು ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು, ಅನುದಾನ ಬಳಕೆ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು, ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡಬೇಕು, ಆಗಿರುವ ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಲುಪಿಸುವ ಹಾಗೂ ಮಾಡಲಿರುವ ಯೋಜನೆಗಳ ಕುರಿತು ಮಾಹಿತಿ ನೀಡುವ ಕೆಲಸ ಮಾಡಬೇಕು. ಪಾಲಿಕೆ ಚುನಾವಣೆಯಲ್ಲಿ ಜನರು ಬಿಜೆಪಿಯತ್ತ ಒಲವು ಹೊಂದುವಂತೆ ನೋಡಿಕೊಳ್ಳಬೇಕು ಎನ್ನುವ ಸೂಚನೆ ನೀಡಲಾಗಿದೆ. ವಲಸೆ ಶಾಸಕರಿಗೂ ಇದು ಅನ್ವಯವಾಗಲಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈಗಾಗಲೇ ಉಪಚುನಾವಣೆಗಳಲ್ಲಿ ಹಿನ್ನೆಡೆ ಅನುಭವಿಸಿ ಟೀಕೆಗೆ ಗುರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಬಿಎಂಪಿ ಚುನಾವಣೆ ಪ್ರತಿಷ್ಠೆಯಾಗಿದೆ. ಹಾಗಾಗಿ ನೇರವಾಗಿ ಮುಖ್ಯಮಂತ್ರಿಗಳೇ ಪಾಲಿಕೆ ಚುನಾವಣಾ ಸಿದ್ದತಾ ಕಾರ್ಯಾದ ಅಖಾಡಕ್ಕೆ ಇಳಿದಿದ್ದಾರೆ. ಅದಕ್ಕಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೂಡಿ, ಕಳೆದ ಎರಡು ದಿನಗಳಿಂದ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸರಣಿ ಸಭೆ ನಡೆಸಲಾಗಿದೆ. ಪಾಲಿಕೆ ಗದ್ದುಗೆಗೇರುವ ಕುರಿತು ಏನೆಲ್ಲಾ ಮಾಡಬಹುದು ಎನ್ನುವ ತಂತ್ರವನ್ನು ಹೆಣೆಯಲಾಗುತ್ತಿದೆ.