ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಹೊರಬಂದ ಬಳಿಕ ಬಿಜೆಪಿ ಸೇರ್ಪಡೆಯಾದ ಬೈರತಿ ಬಸವರಾಜ್, ಮೊದಲ ಬಾರಿಗೆ ಕೆ.ಆರ್.ಪುರ ಕ್ಷೇತ್ರದ ಜನರೊಂದಿಗೆ ಚುನಾವಣಾ ಪೂರ್ವಭಾವಿ ಸಭೆ ನಡೆಸಿದ್ದಾರೆ.
ಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಸವರಾಜ್ ಅವರಿಗೆ ಹಾಗೂ ಪಕ್ಷಕ್ಕಾಗಿ ಉದಾರ ಮನಸ್ಸಿನಿಂದ ಕ್ಷೇತ್ರ ಬಿಟ್ಟುಕೊಟ್ಟಿರುವ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರಿಗೆ ಅಭಿನಂದಿಸಿದರು.
ಬಸವರಾಜ್ ಅವರನ್ನು ನಮ್ಮ ಪಕ್ಷದ ಸೊಸೆಯನ್ನಾಗಿ ಸ್ವೀಕಾರ ಮಾಡಿದ್ದೇವೆ. ಎಲ್ಲರ ಸಮಕ್ಷಮದಲ್ಲಿ ಬೀಗದ ಕೀ ಕೊಡುತ್ತಿದ್ದೇನೆ. ಆಗಾಗ ಪಕ್ಷದ ಹಾಗೂ ಬಸವರಾಜ್ ಅವರ ಹಿತದೃಷ್ಟಿಯಿಂದ ಮಾರ್ಗದರ್ಶನ ಸಲಹೆ-ಸೂಚನೆಗಳನ್ನು ನೀಡುತ್ತಾ ಇರುತ್ತೇವೆ ಎಂದು ಇದೇ ವೇಳೆ ಹಾಸ್ಯಭರಿತವಾಗಿ ಹೇಳಿದ್ರು.
ಬೈರತಿ ಬಸವರಾಜ್ ಮಾತನಾಡಿ, ಕಳೆದ ಸರ್ಕಾರಗಳು ನಮಗೆ ಸರಿಯಾಗಿ ಸ್ಪಂದಿಸಿಲ್ಲ.. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಅನಿವಾರ್ಯವಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆ.ಆರ್.ಪುರ ಕ್ಷೇತ್ರಕ್ಕೆ 625 ಕೋಟಿ ರೂ.ಅನುದಾನ ಮಂಜೂರು ಮಾಡಿರುವುದು ಸಂತೋಷ ತಂದಿದೆ ಎಂದರು.
ಸಭೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಕಂದಾಯ ಸಚಿವ ಅರ್.ಅಶೋಕ್, ಶಾಸಕರಾದ ಅರವಿಂದ ಲಿಂಬಾವಳಿ, ವಿಶ್ವನಾಥ್, ಸತೀಶ್ ರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಮೊದಲಾದ ನಾಯಕರು ಉಪಸ್ಥಿತರಿದ್ದರು.