ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೋಲಿಸುವ ರಣತಂತ್ರ ಹೆಣೆಯುತ್ತಿರುವ ಬಿಜೆಪಿ ಈ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಯಕತ್ವಕ್ಕೆ ಹಿನ್ನಡೆ ಉಂಟು ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಹಿಮಾಚಲ್ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರ ನಿಜವಾದ ಸವಾಲು ಈ ವರ್ಷ ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಾಗಿದ್ದು ಇಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಖರ್ಗೆ ನಾಯಕತ್ವಕ್ಕೆ ಇನ್ನಷ್ಟು ಬಲ ಬರಲಿದೆ.
ರಾಷ್ಟ್ರೀಯ ನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ವಿಫಲಗೊಳಿಸಲು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ. ಇದರ ಜೊತೆ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರದಿಂದಲೇ ಸ್ಪರ್ಧಿಸುತ್ತಿರುವ ಖರ್ಗೆ ಅವರ ಪುತ್ರ ಹಾಗೂ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸಲು ತಂತ್ರ ರೂಪಿಸಿದೆ ಬಿಜೆಪಿ. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರನನ್ನೇ ಗೆಲ್ಲಿಸಿಕೊಳ್ಳಲು ಖರ್ಗೆ ಅವರಿಗೆ ಸಾಧ್ಯವಾಗಿಲ್ಲ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಮುರುಗೇಶ್ ನಿರಾಣಿಗೆ ಹೊಣೆ: ನೆರೆಯ ಬಾಗಲಕೋಟೆ ಜಿಲ್ಲೆಯ ಸಚಿವ ಮುರುಗೇಶ್ ಆರ್ ನಿರಾಣಿ ನೇತೃತ್ವದಲ್ಲಿ ಕಲಬುರ್ಗಿ ಜಿಲ್ಲೆಯ ಬಿಜೆಪಿ ನಾಯಕರು ಪ್ರಿಯಾಂಕ್ ಅವರನ್ನು ಸೋಲಿಸುವ ಜವಾಬ್ದಾರಿಯನ್ನ ಹೆಗಲಿಗೆರಿಸಿಕೊಂಡಿದ್ದಾರೆ. ಇದರಲ್ಲಿಯೂ ಪ್ರಮುಖವಾಗಿ ಕಲಬುರ್ಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಆಳಂದ ಶಾಸಕ ಸುಭಾಷ್ ಗುತ್ತೇದಾರ್, ಅಫಜಲ್ಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಸಾಕಷ್ಟು ನಾಯಕರು ಪ್ರಿಯಾಂಕ್ ಅವರನ್ನು ಸೋಲಿಸುವತ್ತ ಹೆಚ್ಚಿನ ಗಮನ ಹರಿಸಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕ ವಿರುದ್ಧ 31 191 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದ ಪ್ರಿಯಾಂಕ್ ಖರ್ಗೆ 2018ರಲ್ಲಿ ಕೇವಲ 4,393 ಮತಗಳ ಅಂತರದಿಂದ ಗೆದ್ದಿದ್ದಾರೆ. 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹಾಗೂ 13 ಮತ್ತು 18ರಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ವಾಲ್ಮೀಕಿ ನಾಯಕ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ತಮ್ಮ ಪ್ರಾಬಲ್ಯ ಮೆರೆದಿದ್ದು, ಹಂತ ಹಂತವಾಗಿ ಚಿತ್ತಾಪುರದಲ್ಲಿ ಬಿಜೆಪಿ ಮತ ಬ್ಯಾಂಕನ್ನು ಗಟ್ಟಿಗೊಳಿಸುತ್ತಾ ಸಾಗಿದ್ದಾರೆ.
ಇದೀಗ ಬಿಜೆಪಿ ಪ್ರಭಾವಿ ನಾಯಕರು ಹಾಗೂ ಅಕ್ಕಪಕ್ಕದ ಕ್ಷೇತ್ರದ ಪ್ರಭಾವಿ ರಾಜಕಾರಣಿಗಳು ಚಿತ್ತಾಪುರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದು, ಪ್ರಿಯಾಂಕ್ ಖರ್ಗೆ ಸಹ ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ.
ಖರ್ಗೆ ಸೋಲಿಸುವ ವಿಶ್ವಾಸ: ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಳೆದ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಉಮೇಶ್ ಜಾದವ್ ಸಹ ಈ ಬಾರಿ ಕಲಬುರ್ಗಿಯಲ್ಲಿ ಪ್ರಿಯಾಂಕ್ ಅವರನ್ನು ಸೋಲಿಸುವ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಪ್ರಭಾವಿ ನಾಯಕ ರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರನ್ನೇ ಸೋಲಿಸಿರುವ ನಮಗೆ ಪ್ರಿಯಾಂಕ್ ಸೋಲಿಸುವುದು ಕಷ್ಟವೇನೂ ಅಲ್ಲ. ಬಿಜೆಪಿ ನಾಯಕರಲ್ಲ ಒಗ್ಗಟ್ಟಾಗಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಕಲಬುರ್ಗಿಯನ್ನು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೆಲುವಿನ ಪ್ರತಿಷ್ಠೆ: ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರಿಯಾಂಕ್ ಖರ್ಗೆ ಈ ಸಾರಿ ಗೆಲುವನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅನಾಯಾಸವಾಗಿ ಸಚಿವರಾಗುವ ಅವಕಾಶ ಸಹ ಇವರಿಗಿದೆ. ಮಲ್ಲಿಕಾರ್ಜುನ ಖರ್ಗೆ ಅವರೇ ರಾಷ್ಟ್ರೀಯ ನಾಯಕರಾಗಿರುವ ಹಿನ್ನೆಲೆ ಪುತ್ರನ ಗೆಲುವಿಗಾಗಿ ಹಾಗೂ ತನ್ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಲಿದ್ದಾರೆ. ಹಿಂದೆಂದಿಗಿಂತಲೂ ಈ ಬಾರಿ ಗೆಲುವು ಕಾಂಗ್ರೆಸ್ ಪಾಲಿಗೆ ಕಷ್ಟ ಸಾಧ್ಯವಾಗುವ ಜೊತೆಗೆ ಸವಾಲಿನದ್ದೂ ಆಗಿದೆ. ಆದರೆ, ಗೆಲುವು ಅನಿವಾರ್ಯವಾಗಿರುವ ಹಿನ್ನೆಲೆ ತಮ್ಮ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕರಿಗೆ ಗೆಲುವಿಗಾಗಿ ಪ್ರಯತ್ನ ಮಾಡಲಿದ್ದಾರೆ.
ಜನ ಬೆಂಬಲ ಇದೆ: ನನ್ನನ್ನ ಸೋಲಿಸಲು ಬಿಜೆಪಿ ನಾಯಕರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಚಿತ್ತಾಪುರ ಕ್ಷೇತ್ರದ ಜನತೆಗೆ ನನ್ನ ಬಗ್ಗೆ ಗೊತ್ತು. ನಾನು ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದೇನೆ ಎಂಬ ಅರಿವು ಜನರಿಗೆ ಇದೆ. ಅನಗತ್ಯ ಅಪಪ್ರಚಾರ ಗಳಿಗೆ ಕ್ಷೇತ್ರದ ಜನ ಬೆಲೆ ಕೊಡುವುದಿಲ್ಲ. ಕಲಬುರ್ಗಿ ಜಿಲ್ಲೆಯಲ್ಲಿ ಖರ್ಗೆ ಕುಟುಂಬ ಏನು ಕೆಲಸ ಮಾಡಿದೆ ಎನ್ನುವುದು ಮತದಾರರಿಗೆ ತಿಳಿದಿದೆ.
ಅದನ್ನ ಮರೆಮಾಚಿ ಜನರ ಕಣ್ಣಿಗೆ ಮಣ್ಣೆರೆಚಲು ಸಾಧ್ಯವಿಲ್ಲ. ಜಿಲ್ಲೆಯ ಜನ ಪ್ರಜ್ಞಾವಂತರಾಗಿದ್ದಾರೆ. 2013ರಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿ ಒಟ್ಟು 9 ಕ್ಷೇತ್ರಗಳ ಪೈಕಿ ಏಳರಲ್ಲಿ ಗೆಲುವು ಸಾಧಿಸಿತ್ತು. ಕಳೆದ ಬಾರಿಯೂ ಐದು ಸ್ಥಾನ ಗೆದ್ದರೂ ನಂತರ ಅದು ನಾಲ್ಕಕ್ಕೆ ಕುಸಿದಿತ್ತು. ಈ ಸಲ ಕ್ಷೇತ್ರದಲ್ಲಿ ಮತ್ತೊಮ್ಮೆ ನಾವು ನಮ್ಮ ವರ್ಚಸ್ಸು ಪ್ರದರ್ಶಿಸಲಿದ್ದು, ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ತುಕೊಳ್ಳಲಿದೆ. ಗೆಲ್ಲುವ ಕಾಂಗ್ರೆಸ್ ನ ಕ್ಷೇತ್ರಗಳಲ್ಲಿ ಚಿತ್ತಾಪುರ ಸಹ ಒಂದಾಗಲಿದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಸಹ ಸಾಕಷ್ಟು ಆತ್ಮ ವಿಶ್ವಾಸದಿಂದಲೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಪಕ್ಷ ಸಹ ಇವರನ್ನ ಸೋಲಿಸಲು ಭರ್ಜರಿ ಸಿದ್ಧತೆ ನಡೆಸಿದೆ. ಇನ್ನು ನಾಲ್ಕೈದು ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಮತದಾರರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಹಾಲಿ-ಮಾಜಿ ಶಾಸಕರ ಜಟಾಪಟಿ: ಸುರೇಶ್ ಗೌಡ ಬೆಂಬಲಿಗರ ವಿರುದ್ಧ ಪ್ರಕರಣ