ಬೆಂಗಳೂರು: ನಗರದಲ್ಲಿ ನಡೆದ ಮಹಾಘಟಬಂಧನ್ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕಾಗಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ, ಆಡಳಿತ ಹಾಗೂ ಬಿಜೆಪಿ ಸದಸ್ಯರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು. ಕಲಾಪವನ್ನು ಕೆಲಕಾಲ ಮುಂದೂಡಿದ ಪ್ರಸಂಗವೂ ನಡೆಯಿತು. ಬೆಳಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿಯ ಹಿರಿಯ ಶಾಸಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿದರು. ಈ ವಿಚಾರದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿ ಸದನದಲ್ಲಿ ಕಾವೇರಿದ ಸನ್ನಿವೇಶ ಸೃಷ್ಟಿಯಾಯಿತು.
ಬಿಜೆಪಿ ಸದಸ್ಯರು ಸರ್ಕಾರದ ಧೋರಣೆ ವಿರೋಧಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿ ಘೋಷಣೆ ಕೂಗಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಅಶೋಕ್, ರಾಜಕೀಯ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಜೈಲಿನಲ್ಲಿದ್ದವರಿಗೆ ಬೇಲ್ ಮೇಲೆ ಇರುವವರಿಗೆ ಅಧಿಕಾರಿಗಳು ಆತಿಥ್ಯ ನೀಡಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ, ರಾಜಕೀಯ ಕಾರ್ಯಕ್ರಮ. ರಾಜ್ಯದ ಏಳು ಕೋಟಿ ಜನರ ತೆರಿಗೆ ಪಾವತಿ ಹಣವನ್ನು ಈ ರೀತಿ ಬಳಕೆ ಮಾಡಬಾರದು. ರಾಜಕೀಯ ನಾಯಕರನ್ನು ಐಎಎಸ್ ಅಧಿಕಾರಿಗಳು ಹೋಟೆಲ್‍ಗೆ ಕರೆದುಕೊಂಡು ಹೋಗಲು ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಇದು ಅಪರಾಧ ಎಂದು ಆರೋಪಿಸಿದರು.
ಇದಕ್ಕೆ ಬಿಜೆಪಿಯ ಹಲವು ಸದಸ್ಯರು ಬೆಂಬಲಿಸಿದರು. ಈ ಪ್ರಸ್ತಾಪಕ್ಕೆ ಉತ್ತರಿಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಅಶೋಕ್ ಅವರು ಹಿರಿಯ ನಾಯಕರು. ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ರಾಜಕೀಯ ನಾಯಕರನ್ನು ಸ್ವಾಗತಿಸಲು ಅವರನ್ನು ಹೋಟೆಲ್‍ಗಳಿಗೆ ಕರೆದುಕೊಂಡು ಬರಲು ಕಳುಹಿಸಿದ್ದೇವೆ ಎಂಬ ಆರೋಪದಲ್ಲಿ ಹುರುಳಿಲ್ಲ. ಹೊರರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಕೇಂದ್ರ ಮತ್ತು ರಾಜ್ಯದ ಅಧಿಕಾರಿದಲ್ಲಿದ್ದು, ಬಂದವರಿಗೆ ಶಿಷ್ಟಾಚಾರದಂತೆ ಯಾವ ಗೌರವ ಕೊಡಬೇಕೋ ಕೊಟ್ಟಿದ್ದೇವೆ. ನಾವು ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ. ನಮ್ಮ ಪಕ್ಷದಲ್ಲಿ ನಾಯಕರ, ಕಾರ್ಯಕರ್ತರ ಕೊರತೆ ಇಲ್ಲ. ನಮ್ಮ ನಾಯಕರಿಗೆ ಅಧಿಕಾರಿಗಳಿಂದ ಆತಿಥ್ಯ ಬೇಕಿಲ್ಲ. ನಾವು ಅಧಿಕಾರಿಗಳನ್ನು ರಾಜಕೀಯಕ್ಕಾಗಿ ಬಳಸಿಕೊಂಡಿಲ್ಲ. ದೇಶದ 26 ಪಕ್ಷಗಳು ಒಗ್ಗೂಡಿ ದೃಢ ನಿರ್ಧಾರ ತೆಗೆದುಕೊಂಡಿರುವುದನ್ನು ಸಹಿಸಲಾಗುತ್ತಿಲ್ಲ ಎಂದರು.
ಆಗ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಸೇರಿದಂತೆ ಹಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಕಾನೂನು ಸಚಿವರು ನಿಮ್ಮ ಪ್ರಸ್ತಾಪಕ್ಕೆ ಉತ್ತರ ಕೊಟ್ಟಿದ್ದಾರೆ. ಇದನ್ನು ಮುಂದುವರೆಸುವುದು ಬೇಡ. ಕಾರ್ಯಸೂಚಿಯಂತೆ ಕಲಾಪವನ್ನು ಆರಂಭಿಸೋಣ ಎಂದು ಮನವಿ ಮಾಡಿದರು.
ಈ ಹಂತದಲ್ಲಿ ಬಿಜೆಪಿಯ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಮಾತನಾಡಿ, ಕಾನೂನು ಸಚಿವರು ನಿಮ್ಮ ಕಾಲದಲ್ಲೂ ಇಂಥದ್ದು ಆಗಿತ್ತು ಎಂದು ಹೇಳುವುದು ಸರಿಯಲ್ಲ. ಮುಖ್ಯ ಕಾರ್ಯದರ್ಶಿಯವರು ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಬೇಕಿತ್ತು. ಅವರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದರು.
ವಿಮಾನ ನಿಲ್ದಾಣಕ್ಕೆ ಹೋಗಿ ರಾಜಕೀಯ ನಾಯಕರನ್ನು ಕರೆದುಕೊಂಡು ಬರಲು ಅಧಿಕಾರಿ ನಿಯೋಜಿಸಿರುವುದು ಸರಿಯಲ್ಲ. ಗಣ್ಯ ವ್ಯಕ್ತಿಗಳಿಗೆ ಭದ್ರತೆ ಕೊಡಬೇಡಿ ಎನ್ನುವುದಿಲ್ಲ. ಆತಿಥ್ಯಕ್ಕೆ ಖಾಸಗಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಇದಕ್ಕೆ ಕಾಂಗ್ರೆಸ್ ಹಣ ಖರ್ಚು ಮಾಡಿದೆಯೋ ಅಥವಾ ಕಾಂಗ್ರೆಸ್ ಸರ್ಕಾರದ ಹಣ ಖರ್ಚು ಮಾಡಿದೆಯೋ ಗೊತ್ತಿಲ್ಲ ಎಂದರು. ಆಗ ಆಡಳಿತ ಪಕ್ಷದ ನಾಯಕ ಪಿ.ಎಂ. ನರೇಂದ್ರಸ್ವಾಮಿ, ಪಕ್ಷವೇ ಖರ್ಚು ಮಾಡಿದೆ ಎಂದರು. ಮತ್ತೆ ಮಾತನಾಡಿದ ಅಶೋಕ್, ಯಾರ್ಯಾರಿಗೆ ಆತಿಥ್ಯ ನೀಡಲಾಗಿದೆ ಎಂಬುದನ್ನು ವಾಚಿಸಲು ಮುಂದಾಗಿ, ಯಾವ ಶಿಷ್ಟಾಚಾರದ ಪ್ರಕಾರ ಮಾಡಲಾಗಿದೆ ಎಂದು ಪ್ರಶ್ನಿಸಿದರು.
ಸುನೀಲ್ ಕುಮಾರ್ ಮಾತನಾಡಿ, ಈ ವಿಚಾರವನ್ನು ಸರ್ಕಾರ ಹಗುರವಾಗಿ ಪರಿಗಣಿಸುವಂತಿಲ್ಲ ಎಂದಾಗ, ಆಡಳಿತ ಪಕ್ಷದ ಹಲವು ಸದಸ್ಯರು ಎದ್ದು ನಿಂತು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಎಚ್.ಕೆ.ಪಾಟೀಲ್ ಅವರು ಮತ್ತೆ ಮಾತನಾಡಿ, ನಾವು ಚರ್ಚೆಗೆ ತಯಾರಿದ್ದೇವೆ ಎಂದರು. ಆಗ ಸುನೀಲ್ ಕುಮಾರ್ ಮಾತನಾಡಿ, ಈ ವಿಚಾರದಲ್ಲಿ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು. ಇದು ನಿಮ್ಮ ಮನೆಯ ಕೆಲಸವಲ್ಲಿ. ರಾಜಕೀಯ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರುವುದು ಸರಿಯಲ್ಲ ಎಂದು ಹೇಳಿದ್ದು ಆಡಳಿತ ಪಕ್ಷದ ಶಾಸಕರನ್ನು ಕೆರಳಿಸಿತು.
ಆಗ ಆಡಳಿತ ಮತ್ತು ಬಿಜೆಪಿಯ ಹಲವು ಶಾಸಕರು ಏರಿದ ದನಿಯಲ್ಲಿ ವಾಗ್ವಾದಕ್ಕೆ ಇಳಿದರು. ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣಬೈರೇಗೌಡ, ಕೆ.ಜೆ. ಜಾರ್ಜ್ ಇತರರು ಬಿಜೆಪಿಯ ಧೋರಣೆಯನ್ನು ತೀವ್ರವಾಗಿ ಆಕ್ಷೇಪಿಸಿ ಮಾತನಾಡಿದರು. ಕೃಷ್ಣಬೈರೇಗೌಡ ಮಾತನಾಡಿ, ಬಿಜೆಪಿಯವರು ನೋಟಿಸ್ ಕೊಡಲಿ ನಾವು ತಯಾರಿದ್ದೇವೆ. ಈ ಹಂತದಲ್ಲಿ ಪ್ರವೇಶಿಸಿದ ಸಭಾಧ್ಯಕ್ಷರು, ಈಗಾಗಲೇ ನೀವು ಮಾಡಿದ ಪ್ರಸ್ತಾವಕ್ಕೆ ಸರ್ಕಾರ ಉತ್ತರ ಕೊಟ್ಟಿದೆ. ನೋಟಿಸ್ ನೀಡದೆ ಹೇಗೆ ಚರ್ಚೆ ಮಾಡುವುದು? ಚರ್ಚೆ ಮಾಡುವುದಾದರೆ ನೋಟಿಸ್ ಕೊಡಿ. ಮುಂದಿನ ಕಾರ್ಯ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದರು.
ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಏರಿದ ದನಿಯಲ್ಲಿ ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಬಿಜೆಪಿ ಸದಸ್ಯರು ಸರ್ಕಾರದ ಧೋರಣೆಯನ್ನು ವಿರೋಧಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿಸಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪದೇ ಪದೇ ಮಾಡಿಕೊಂಡ ಮನವಿಗೆ ಸ್ಪಂದಿಸದೆ ಇದ್ದಾಗ ಸಭಾಧ್ಯಕ್ಷರು ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಇದನ್ನೂ ಓದಿ: ಮಹಾ ಘಟಬಂಧನ್ ನಾಯಕರ ಔತಣಕೂಟ .. 40ಕ್ಕೂ ಹೆಚ್ಚು ನಾಯಕರು ಭಾಗಿ