ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಶಾಸಕರ ಒಂದು ಬಣ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ವೈ ಜೊತೆ ನಡೆದ ಶಾಸಕರ ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಾಸಕರು ಗರಂ ಆದ ಘಟನೆ ನಡೆದಿದೆ. ಅನುದಾನ, ಅಭಿವೃದ್ಧಿ ಯೋಜನೆಗಳ ಕುರಿತ ಮಾತುಕತೆ ನಂತರ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಶಾಸಕ ಯತ್ನಾಳ್ ವಿಷಯ ಪ್ರಸ್ತಾಪ ಮಾಡಿದ್ದಾರೆ. ಪದೇ ಪದೇ ಸಿಎಂ ಮೇಲೆ ಆರೋಪ ಮಾಡುತ್ತಿರುವ ಅವರ ವಿರುದ್ಧ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಎಂ ವಿರುದ್ಧ ಸ್ವಪಕ್ಷೀಯ ಶಾಸಕರೇ ಮಾತನಾಡಿದರೆ ಜನತೆಗೆ ಏನು ಸಂದೇಶ ಹೋಗಲಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಯತ್ನಾಳ್ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರ ಆಗ್ರಹ... ಮುಖ್ಯಮಂತ್ರಿ ಭೇಟಿ ಮಾಡಿ ದೂರು
ಇಷ್ಟಕ್ಕೆ ಸುಮ್ಮನಾಗದೆ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಾಸಕರ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಇಂದು 55-60 ಶಾಸಕರು ಸಿಎಂ ಸಭೆಗೆ ಆಗಮಿಸಿದ್ದು, ಅವರಲ್ಲಿ ಬಹುತೇಕರು ಸಹಿ ಹಾಕಿದ್ದಾರೆ. ಮತ್ತಷ್ಟು ಶಾಸಕರಿಂದ ಸಹಿ ಸಂಗ್ರಹ ಮಾಡುವ ಚಿಂತನೆ ನಡೆಸಲಾಗಿದೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಹಿ ಸಂಗ್ರಹಿಸುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಶಾಸಕರ ಸಹಿ ಸಂಗ್ರಹದ ಪತ್ರವನ್ನು ಕಳುಹಿಸಿಕೊಡಲು ರೇಣುಕಾಚಾರ್ಯ ತಂಡ ನಿರ್ಧರಿಸಿದೆ.
ಅಗತ್ಯ ಬಿದ್ದರೆ ದೆಹಲಿಗೆ ತೆರಳಿ ಖುದ್ದಾಗಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಯತ್ನಾಳ್ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.