ಬೆಂಗಳೂರು: ಸ್ವಪಕ್ಷೀಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿಯ ಶಾಸಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಅರುಣ್ ಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿಧಾನಸೌಧದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅನಗತ್ಯವಾಗಿ ಆರೋಪ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಟೀಕೆ ಮಾಡುವುದು ಎಷ್ಟು ಸರಿ? : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಯತ್ನಾಳ್ ನಮ್ಮ ಹಿರಿಯ ಮುಖಂಡರು. ಪದೇ ಪದೆ ಯಡಿಯೂರಪ್ಪ ಬಗ್ಗೆ ಟೀಕೆ ಮಾಡೋದು ಎಷ್ಟು ಸರಿ? ಯಡಿಯೂರಪ್ಪ ಕುಟುಂಬ ಟಾರ್ಗೆಟ್ ಮಾಡಿಕೊಂಡು ಯತ್ನಾಳ್ ಮಾತನಾಡ್ತಿದ್ದಾರೆ. ಏನಾದ್ರೂ ವಿಜಯೇಂದ್ರ ಭ್ರಷ್ಟಾಚಾರ ಮಾಡಿರುವ ದಾಖಲೆ ಇದ್ರೆ ಯತ್ನಾಳ್ ಬಿಡುಗಡೆ ಮಾಡಲಿ. ಯತ್ನಾಳ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತೇವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯತ್ನಾಳ ವಿರುದ್ಧ ಕಚೇರಿ ಮುಂದೆ ಧರಣಿ ಮಾಡಿದರೂ ಆಶ್ಚರ್ಯ ಪಡಬೇಡಿ ಎಂದರು.
ಹೀಗೆ ಯತ್ನಾಳ್ ಮಾತನಾಡುತ್ತಿದ್ದರೆ ಪಕ್ಷಕ್ಕೂ ನಾಯಕರಿಗೂ ಡ್ಯಾಮೇಜ್ ಆಗ್ತಿದೆ. ಡಿ ಗ್ರೂಪ್ ನೌಕರರ ವರ್ಗಾವಣೆ ಕೂಡ ಸಿಎಂ ಮನೆಯಿಂದ ಆಗಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಯತ್ನಾಳ್ ಹಿರಿಯ ಮುಖಂಡರಾಗಿ ತಿಳಿದುಕೊಂಡು ಮಾತನಾಡಬೇಕು. ಅವರ ನಡವಳಿಕೆ ನೋಡ್ತಿದ್ರೆ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಒತ್ತಾಯ ಮಾಡ್ತೇವೆ. ಸದ್ಯದಲ್ಲೇ ಶಾಸಕಾಂಗ ಸಭೆ ಕರೆದಾಗ ಯತ್ನಾಳ್ ಅವರನ್ನು ನಿಷ್ಟಾವಂತ ನಾಯಕರು ತರಾಟೆಗೆ ತೆಗೆದುಕೊಳ್ಳುತ್ತೇವೆ. ಇನ್ನಾದ್ರೂ ಯತ್ನಾಳ್ ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು. ನಾವೆಲ್ಲ ಶಾಸಕರು ಪಕ್ಷ ಸರ್ಕಾರ ಉಳಿಸಬೇಕು ಎನ್ನುವಂತಹವರು ಆಗ್ರಹ ಮಾಡುತ್ತೇವೆ. ಇನ್ನಾದ್ರೂ ಅವರು ಬಾಯಿ ಮುಚ್ಚಿಕೊಂಡಿರಬೇಕು. ಇದಕ್ಕೆ ಜಗ್ಗದೆ ಬಗ್ಗದೇ ಹೋದರೆ ನಾವು ಏನು ಮಾಡಬೇಕು ಮಾಡ್ತೇವೆ ಎಂದು ಹೇಳಿದರು.
ಯಾಕೆ ಟಾರ್ಗೆಟ್ ಮಾಡ್ತೀರಿ?: ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಯತ್ನಾಳ್ ಅವರೇ ಯಡಿಯೂರಪ್ಪ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡ್ತಿದ್ದೀರಿ. ನಿಮ್ಮ ಬಳಿ ದಾಖಲೆ ಏನಿದೆ..? ನಾಟಕ ಮಾಡೋದು ಬಿಡಿ ಯತ್ನಾಳ್ ಅವರೇ. ನಿಮಗೆ ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಿ. ಮಾಧ್ಯಮದ ಮುಂದೆ ಮಾತನಾಡೋದನ್ನೇ ಪಕ್ಷ ಹೇಳಿಕೊಟ್ಟಿದೆಯಾ? ಬಿಜೆಪಿ ಇದನ್ನೇ ಕಲಿಸಿಕೊಟ್ಟಿದೆಯಾ? ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಯತ್ನಾಳ್ ಮಾತಿನಿಂದ ನೋವಾಗ್ತಿದೆ. ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದವರು. ಯಡಿಯೂರಪ್ಪ ಯತ್ನಾಳ್ ಅವರಿಂದ ಹೇಳಿಸಿಕೊಂಡು ಕಲಿಯೋದು ಬೇಕಾಗಿಲ್ಲ. ನಿಮಗೆ ಯಾವ ನೈತಿಕ ಹಕ್ಕಿದೆ. ಹೊನ್ನಾಳಿ ಸಮಾಜದ ಜನ ನನಗೆ ವೋಟು ಕೊಟ್ಟಿದ್ದಾರೆ. ಪಂಚಮಸಾಲಿ ಸಮಾಜ ಸೇರಿ ಎಲ್ಲ ಪಂಗಡದವರೂ ನನಗೆ ವೋಟು ಹಾಕಿದ್ದಾರೆ. ಇನ್ನು ಮುಂದೆ ಯಡಿಯೂರಪ್ಪ ಬಗ್ಗೆ ಆರೋಪ ಮಾಡಿದರೆ ಸಹಿಸೋದಿಲ್ಲ. ಶಾಸಕಾಂಗ ಸಭೆ ಕರೆದು ಯತ್ನಾಳ ಅವರನ್ನ ಉಚ್ಚಾಟನೆ ಮಾಡುವಂತೆ ನಾನು ಆಗ್ರಹಿಸುತ್ತೇನೆ. ಮಾತೆತ್ತಿದರೆ ವಾಜಪೇಯಿ ಹೆಸರೇಳಿ ಕಪಟ ನಾಟಕ ಮಾಡ್ತಿದ್ದೀರಾ ಎಂದರು.