ಬೆಂಗಳೂರು: ಬಿಜೆಪಿ ಶಾಸಕರು ದಿನದಿಂದ ದಿನಕ್ಕೆ ಭ್ರಷ್ಟಾಚಾರವನ್ನು ಹೆಚ್ಚಿಸುತ್ತಿದ್ದು, ಬಿಜೆಪಿ ಪಕ್ಷವು ಬ್ರೋಕರ್ ಜನತಾ ಪಕ್ಷವಾಗಿ ಹೊರಹೊಮ್ಮಿದೆ ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪರಸಪ್ಪ ಅವರು ಒಂದು ವಿಡಿಯೋದಲ್ಲಿ ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಮೊತ್ತಕ್ಕೆ ಡೀಲ್ ಮಾಡಿ, 2020 ಆಗಸ್ಟ್ನಲ್ಲಿ ಕನಕಗಿರಿ ಶಾಸಕರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಾಗಿರುವ ಕಾರಣ, ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ.
ವ್ಯವಹಾರ ಮಾಡಿ 30 ಲಕ್ಷಕ್ಕೆ ಡೀಲ್ ನಿರ್ಧರಿಸುತ್ತಾರೆ ಎಂದು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ 15 ಲಕ್ಷ ನೀಡುತ್ತಾರೆ. ನಾವು ಯಾವಾಗಲೂ ಹೇಳುವಂತೆ ವಿಧಾನಸೌಧ ವ್ಯಾಪಾರ ಸೌಧವಾಗಿದೆ. ಶಾಸಕರ ಭವನದಲ್ಲಿ ಡೀಲ್ ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆ ಆಗುವುದಿಲ್ಲವೇ? ಕೆಲಸ ಆಗದ ನಂತರ ಹಣ ಕೇಳಿದಾಗ ನಾನು ಹಣವನ್ನು ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಈ ಸರ್ಕಾರ ಎಂದರೆ ವಿಧಾನಸೌಧ ಅಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರು, ಸಚಿವರು ಬ್ರೋಕರ್: ಶಾಸಕರು ಹಣ ವಾಪಸ್ ಮಾಡದ ಹಿನ್ನೆಲೆಯಲ್ಲಿ ಈ ಪ್ರಕರಣ ಬಹಿರಂಗವಾಗಿದೆ. ಬಿಜೆಪಿ ಶಾಸಕರು, ಸಚಿವರು ಬ್ರೋಕರ್ಗಳಾಗಿದ್ದಾರೆ. ಬಿಜೆಪಿ ಭಾರತೀಯ ಜನತಾ ಪಕ್ಷದಿಂದ ಭ್ರಷ್ಟ ಜನತಾ ಪಕ್ಷವಾಗಿತ್ತು. ಈಗ ಶಾಸಕರು ಬ್ರೋಕರ್ ಜನತಾ ಪಕ್ಷವಾಗಿದೆ. ಈ ಪ್ರಕರಣದಲ್ಲಿ ಇಷ್ಟೆಲ್ಲ ಆದರೂ ಶಾಸಕರಿಗೆ ನೋಟೀಸ್ ಹೋಗಿಲ್ಲ.
ಸುಮೋಟೋ ಪ್ರಕರಣ ದಾಖಲಾಗಿಲ್ಲ. ಮುಖ್ಯಮಂತ್ರಿಗಳು ಶಾಸಕರನ್ನು ಕರೆದು ಪ್ರಶ್ನೆ ಮಾಡಿಲ್ಲ ಯಾಕೆ? ಆಗ ಗೃಹಮಂತ್ರಿಯಾಗಿದ್ದವರು ಬೊಮ್ಮಾಯಿ ಅವರೇ ಅಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಸಾಕಷ್ಟು ವಿಚಾರಗಳ ಮೇಲೆ ಚರ್ಚೆಗೆ ಅವಕಾಶ ಕೇಳುತ್ತೇವೆ. ಅವಕಾಶ ಸಿಗದಿದ್ದರೆ ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
'ಸದನದಲ್ಲಿ ಚರ್ಚಿಸಲು ಭ್ರಷ್ಟಾಚಾರ, ಬೆಳೆ ಹಾನಿ, ಬೆಂಗಳೂರು, ಕೆಪಿಎಸ್ಸಿ, ಕೆಇಎ ಅಕ್ರಮ ಸೇರಿದಂತೆ ಹಲವು ವಿಚಾರಗಳಿವೆ. ಶಾಸಕಾಂಗ ಪಕ್ಷದ ನಾಯಕರು ಈ ಎಲ್ಲ ವಿಚಾರ ಪಟ್ಟಿ ಮಾಡಿಕೊಂಡು ಒಂದೊಂದೇ ಚರ್ಚೆಗೆ ತೆಗೆದುಕೊಳ್ಳುತ್ತಾರೆ. ನಾನು ಶೇ.40 ಸರ್ಕಾರದ ಬಗ್ಗೆ ಹಾಗೂ ನೇಮಕಾತಿ ಅಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಪೀಕರ್ ಅವರು ಕಳೆದ ಬಾರಿ ಅವಕಾಶ ನೀಡಲಿಲ್ಲ. ಈ ಬಾರಿ ಅವಕಾಶ ನೀಡಬೇಕು. ಚರ್ಚೆಗೆ ಅವಕಾಶ ನೀಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಪಿಎಸ್ಐ ಅಕ್ರಮ ಪ್ರಕರಣ: ಶಾಸಕ ಬಸವರಾಜ ದಡೇಸುಗೂರು ಪ್ರಕರಣದ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ನೀಡಬಹುದಲ್ಲವೇ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ನನಗೆ ತಿಳಿದಿರುವ ಮಾಹಿತಿ ಪ್ರಕಾರ ಖಾಸಗಿ ವ್ಯಕ್ತಿಯೊಬ್ಬರು ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇನ್ನು ನಮ್ಮ ಕಾನೂನು ಘಟಕ ಪಕ್ಷದ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲು ಮುಂದಾಗಿತ್ತು. ಈಗ ಹೊಸ ಬೆಳವಣಿಗೆ ಆಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಪಿಐಎಲ್ ಅರ್ಜಿ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಲುತ್ತೇವೆ ಎಂದರು.
ಪ್ರಕರಣ ತನಿಖೆ ಮಾಡಿದರೆ ನನ್ನ ಬಳಿ ಇರುವ ಸಾಕ್ಷ್ಯಾಧಾರ ನೀಡುತ್ತೇವೆ ಎಂದು ಬಸವರಾಜ ದಡೇಸುಗೂರು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು 'ಸರ್ಕಾರ ನಮ್ಮ ಮಾತು ಕೇಳಿ ತನಿಖೆ ನಡೆಸದಿದ್ದರೂ, ಅವರ ಮಾತು ಕೇಳಿಯಾದರೂ ತನಿಖೆ ಮಾಡಿಸಲಿ. ಸರ್ಕಾರ ಆರಂಭದಿಂದಲೂ ಇದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಈ ಪ್ರಕರಣದಲ್ಲಿ ಸತ್ಯಾಂಶ ಹೊರತರುವ ಉದ್ದೇಶ ಸರ್ಕಾರಕ್ಕೆ ಇದ್ದಿದ್ದರೆ ಇಷ್ಟು ಹೊತ್ತಿಗೆ ನ್ಯಾಯಾಂಗ ತನಿಖೆಗೆ ನೀಡುತ್ತಿದ್ದರು' ಎಂದು ಹೇಳಿದರು.
ಶಾಸಕರ ಭವನದ ಸಿಸಿಟಿವಿ ವಿಡಿಯೋ ಪರಿಶೀಲಿಸಲಿ: ಪಿಎಸ್ಐ ಹುದ್ದೆಗಳನ್ನು ಶಾಸಕರಿಗೆ ಇಂತಿಷ್ಟು ಹಂಚಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಶಿವರಾಜ ತಂಗಡಗಿ, ‘ರಾಜ್ಯದ ಎಲ್ಲ ಭಾಗಗಳಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಅದು ನಿಜ ಅನಿಸುತ್ತಿದೆ. ಶಾಸಕರು ಮೊದಲು ಆಡಿಯೋದಲ್ಲಿ ತನ್ನದೇ ಧ್ವನಿ ಎಂದು ಹೇಳಿದ್ದು, ಈಗ ಅಲ್ಲಗೆಳೆಯುತ್ತಿದ್ದಾರೆ. ವಿಡಿಯೋದಲ್ಲಿ ಹಣ ನೀಡಿದ ದಿನಾಂಕವನ್ನು ತಿಳಿಸಿದ್ದು, ಶಾಸಕರ ಭವನದ ಸಿಸಿಟಿವಿ ವಿಡಿಯೋ ಪರಿಶೀಲಿಸಲಿ’ ಎಂದು ತಿಳಿಸಿದರು.
ಕಾನೂನು ವಿಭಾಗದ ಮುಖ್ಯಸ್ಥ ಪೊನ್ನಣ್ಣ ಮಾತನಾಡಿ, ರಾಜ್ಯದಲ್ಲಿ ಭ್ರಷ್ಚಾಚಾರ ನಿಗ್ರಹ ಕಾನೂನು ಇದೆ. ಈ ಕಾನೂನು ಪ್ರಕಾರ ಸ್ವಯಂ ಒಪ್ಪಿಗೆ ಮಾತುಗಳು ಸೆಕ್ಷನ್ 7ಎ ಹಾಗೂ 8ರ ಅಡಿ ಬರುತ್ತವೆ. ಸಾರ್ವಜನಿಕ ಪ್ರತಿನಿಧಿ ಅಲ್ಲದಿದ್ದರೂ ಯಾವುದೇ ವ್ಯಕ್ತಿ ಕೆಲಸ ಮಾಡಿಸಿ ಕೊಡುವುದಾಗಿ ಹಣ ಪಡೆದರೆ ಅದು ಅಪರಾಧವಾಗುತ್ತದೆ.
ಸುಮೋಟೋ ಪ್ರಕರಣ ದಾಖಲಿಸಬೇಕಿತ್ತು: ಹೀಗಾಗಿ ಈ ಆಡಿಯೋ ವಿಚಾರವಾಗಿ ಸುಮೋಟೋ ಪ್ರಕರಣ ದಾಖಲಿಸಬೇಕಿತ್ತು. ಈ ಕಾನೂನು ಅಡಿ 3 ವರ್ಷದಿಂದ 7 ವರ್ಷದವರೆಗೂ ಶಿಕ್ಷೆ ವಿಧಿಸಬಹುದು. ಹೀಗಾಗಿ ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹೀಗಾಗಿ ಲೋಕಾಯುಕ್ತ ಸಂಸ್ಥೆ ಹಾಗೂ ಸರ್ಕಾರ ಗಮನಿಸಬೇಕು. ಜೊತೆಗೆ ಲೋಕಪಾಲ ಮಟ್ಟದಲ್ಲಿ ಈ ವಿಚಾರವನ್ನು ತೆಗೆದುಕೊಂಡು ಶಾಸಕರನ್ನು ಅನರ್ಹಗೊಳಿಸಲು ಮುಂದಾಗಬೇಕು ಎಂದರು.
(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಬಿಜೆಪಿ ಶಾಸಕ ದಡೇಸಗೂರು ವಿರುದ್ಧ ತನಿಖೆ ಸುಳಿವು ನೀಡಿದ ಸಿಎಂ)