ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 8.30ಕ್ಕೆ ಪಕ್ಷದ ಎಲ್ಲ ಶಾಸಕರೂ ವಿಧಾನಸೌಧಕ್ಕೆ ಬಂದು ಸೇರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಅಭ್ಯರ್ಥಿವಾರು ಮತದಾನಕ್ಕೆ ನಾಳೆ ತಂಡ ತಂಡವಾಗಿ ಶಾಸಕರನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ 115 ಶಾಸಕರು ಭಾಗಿಯಾಗಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿ ಗೆಲ್ಲಲು ಬೇಕಾದ ಕಾರ್ಯತಂತ್ರದ ಕುರಿತು ಸಭೆಯಲ್ಲಿ ಚರ್ಚಿಸಿ ಯಾವ ರೀತಿ ಮತದಾನದಲ್ಲಿ ಭಾಗಿಯಾಗಬೇಕು ಎನ್ನುವ ಕುರಿತು ವಿವರಣೆ ನೀಡಲಾಯಿತು.
ಅಂತಿಮವಾಗಿ ನಾಳೆ ಬೆಳಗ್ಗೆ 8.30ಕ್ಕೆ ವಿಧಾನಸೌಧಕ್ಕೆ ಬರುವಂತೆ ಬಿಜೆಪಿ ಶಾಸಕರಿಗೆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು. ಎಲ್ಲ ಶಾಸಕರೂ ವಿಧಾನಸೌಧದ 334ನೇ ಕೊಠಡಿಗೆ ಬರುವಂತೆ ಸೂಚಿಸಿದ ಸಿಎಂ, ಯಾವ ಸದಸ್ಯರು ಯಾವಾಗ ಮತದಾನ ಮಾಡಬೇಕು, ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎನ್ನುವುದನ್ನು ನಾಳೆ ತಿಳಿಸುವುದಾಗಿ ಶಾಸಕರಿಗೆ ಹೇಳಿದ್ದಾರೆ. ಹಾಗಾಗಿ ನಾಳೆ ಮೂವರು ಸಚಿವರು ಮತದಾನದ ಜವಾಬ್ದಾರಿ ಹೊತ್ತು ತಂಡ ತಂಡವಾಗಿ ಶಾಸಕರಿಂದ ಮತದಾನ ಮಾಡಿಸಲಿದ್ದಾರೆ.
ಭೋಜನಕೂಟ: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕರಿಗೆ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಭೋಜನಕೂಟ ಏರ್ಪಡಿಸಿದ್ದರು. ಶಾಸಕಾಂಗ ಪಕ್ಷದ ಸಭೆ ಮುಗಿಯುತ್ತಿದ್ದಂತೆ ಎಲ್ಲ ಶಾಸಕರು ಭೋಜನಕೂಟದಲ್ಲಿ ಭಾಗಿಯಾದರು. ಕರ್ನಾಟಕದಿಂದ ಎರಡನೇ ಬಾರಿಗೆ ರಾಜ್ಯಸಭೆಗೆ ಸ್ಪರ್ಧೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ಸಲುವಾಗಿ ಭೋಜನಕೂಟ ಏರ್ಪಡಿಸಿ ಮತಯಾಚಿಸಿದರು.
ಬಿಎಸ್ವೈ ಕಾರು ಪಾರ್ಕಿಂಗ್ಗೆ ಸಿಎಂ ಕಾರು ತೆರವು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದ ಖಾಸಗಿ ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಕಾರನ್ನು ತೆರವುಗೊಳಿಸಿ ಅದೇ ಜಾಗದಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರ ಕಾರು ಪಾರ್ಕಿಂಗ್ ಮಾಡಿದ ಘಟನೆ ನಡೆಯಿತು. ಸಭೆಗೆ ಯಡಿಯೂರಪ್ಪ ತಡವಾಗಿ ಆಗಮಿಸಿದರು. ಬಿಎಸ್ವೈ ಆಗಮಿಸುವ ಮೊದಲೇ ಸಿಎಂ ಆಗಮಿಸಿದ್ದರಿಂದ ಪ್ರೋಟೋಕಾಲ್ ಪ್ರಕಾರ ಸಿಎಂ ಕಾರನ್ನು ಹೋಟೆಲ್ ದ್ವಾರದ ಎದುರು ನಿಲ್ಲಿಸಲಾಗಿತ್ತು. ಆದರೆ ಯಡಿಯೂರಪ್ಪ ತಡವಾಗಿ ಆಗಮಿಸಿದ್ದರಿಂದ ಅವರ ಕಾರಿಗೆ ಹೋಟೆಲ್ ದ್ವಾರದವರೆಗೂ ತೆರಳಲು ಅವಕಾಶ ಕಲ್ಪಿಸಲು ಸಿಎಂ ಕಾರನ್ನು ಆ ಸ್ಥಳದಿಂದ ತೆರವು ಮಾಡಲಾಯಿತು.
ಇದನ್ನೂ ಓದಿ: ನಾಳೆ ಜಿದ್ದಾಜಿದ್ದಿನ ರಾಜ್ಯಸಭೆ ಚುನಾವಣೆ: ಮೂರು ಪಕ್ಷಕ್ಕೆ ಸಿಂಧು, ಅಸಿಂಧು ಮತಗಳ ತಲೆನೋವು