ಬೆಂಗಳೂರು: ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ನಾವು ಸಾಕಷ್ಟು ಮಾಡಿಕೊಂಡಿದ್ದೇವೆ. ಈಗ ಅವರ ಋಣ ತೀರಿಸುವ ಸಮಯ ಬಂದಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ.
ಶೇ 160ರಷ್ಟು ಕಮಿಷನ್ ಹೊಡೆದಿದ್ದಾರೆ: ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ನ 60 ವರ್ಷದ ನಿಜ ಬಣ್ಣವನ್ನು ರಮೇಶ್ ಕುಮಾರ್ ಹೊರಹಾಕಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಡಿ ವಿಚಾರಣೆಗೆ ರಮೇಶ್ ಕುಮಾರ್ ಸಾಕ್ಷಿ ಕೊಟ್ಟಿದ್ದಾರೆ. ನಮ್ಮ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ರು. ಇದೀಗ ಅವರ ಪಕ್ಷದವರೇ 3-4 ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆಂದು ಹೇಳಿದ್ದಾರೆ. ಮೂರ್ನಾಲ್ಕು ತಲೆಮಾರು ಲೆಕ್ಕಾ ಹಾಕಿದರೆ ಶೇ 160ರಷ್ಟು ಕಮಿಷನ್ ಹೊಡೆದಿದ್ದಾರೆಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಮಾಯಿಲ್ ಮರಾಠಿ: ಸಚಿವ ಸುಧಾಕರ್ ಮಾತನಾಡಿ, ಕಾಂಗ್ರೆಸ್ನ ಒಬ್ಬೊಬ್ಬರು ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆ. ಅವರು ಮಾಯಿಲ್ ಮರಾಠಿ ಅಂದ್ರೆ ಕೋಲಾರ ಭಾಗದ ಮಂತ್ರವಾದಿ ಎಂದು ಕಿಡಿ ಕಾರಿದರು. ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ವ್ಯರ್ಥ ಪ್ರಯತ್ನ ಮಾಡ್ತಿದ್ರು. ರಮೇಶ್ ಕುಮಾರ್ ಅದಕ್ಕೆ ತಿಲಾಂಜಲಿ ಹಾಕಿದ್ದಾರೆ.
ಭ್ರಷ್ಟಾಚಾರ ಬಗ್ಗೆ, ದೊಡ್ಡ ಹಗರಣದ ಬಗ್ಗೆ ಅವರೇ ಹೇಳಿದ್ದಾರೆ. ಅವರು ಸತ್ಯ ಹೇಳಿದ್ದಾರೆ. ಕೋಲಾರ ಭಾಗದ ಎಲ್ಲರಿಗೂ ಅವರ ಬಗ್ಗೆ ಗೊತ್ತಿದೆ. ಸ್ಪೀಕರ್ ಆಗಿ ಅವರ ವರ್ತನೆ ಬಗ್ಗೆ ನಾನು ಸದನದಲ್ಲೂ ಹೇಳಿದ್ದೇನೆ. ಇಡೀ ದೇಶದಲ್ಲಿ ಯಾವ ಸ್ಪೀಕರ್ ಮಾಡದ ಗನಂಧಾರಿ ಕೆಲಸ ಅವರು ಮಾಡಿದರು ಎಂದು ಟೀಕಿಸಿದರು.
ಅತಿ ಬುದ್ಧಿವಂತರೆಲ್ಲ ಹೀಗೇ ಮಾತಾಡೋದು: ಸಚಿವ ಶಿವರಾಂ ಹೆಬ್ಬಾರ್ ಪ್ರತಿಕ್ರಿಯಿಸಿ, ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡಲು ಹೋದ್ರೆ ಹೀಗೆ ಆಗೋದು. ರಮೇಶ್ ಕುಮಾರ್ ಕರ್ನಾಟಕದಲ್ಲಿ ಅವರಿಗಿಂತ ಬುದ್ಧಿವಂತರು ಬೇರೆ ಯಾರೂ ಇಲ್ಲ ಅಂದುಕೊಂಡಿದ್ದಾರೆ. ಅತಿಯಾದ ಮಾತಿನಿಂದ ಭರವಸೆಗಳನ್ನು ಕಳೆದುಕೊಳ್ಳುತ್ತಾರೆ ಎಂದರು.
ತಿಂದು ತೇಗಿದ್ದೀರಿ, ಮತ್ತೆ ಹೋರಾಟ ಮಾಡ್ತೀರಾ: ಕಾಂಗ್ರೆಸ್ನ ಹೋರಾಟಕ್ಕೆ ಕೌಂಟರ್ ನೀಡಿದ ಶಾಸಕ ರೇಣುಕಾಚಾರ್ಯ, ಯಾವ ಪುರುಷಾರ್ಥಕ್ಕೆ ಹೋರಾಟ ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು. ಈ ಹಿಂದೆ ನರೇಂದ್ರ ಮೋದಿ ಅವರ ವಿರುದ್ಧವೂ ತನಿಖೆ ಮಾಡಿಸಿದ್ದೀರಿ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ದೇವರ ಮಕ್ಕಳಾ?. ರೌಡಿ ನಲಪಾಡ್ ಕಳುಹಿಸುತ್ತೀರಾ ಹೋರಾಟಕ್ಕೆ. ಜಾತ್ಯತೀತ ಅಂತೀರಾ, ಜಾತಿ ಹೆಸರಲ್ಲಿ ಮತ ಕೇಳ್ತೀರಾ. ನಾಚಿಕೆ ಆಗಲ್ವಾ? ಎಂದು ಟೀಕಿಸಿದರು.
ಇದನ್ನೂ ಓದಿ: ಗಾಂಧಿ ಕುಟುಂಬದ ಹೆಸರಲ್ಲಿ ಮೂರ್ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ - ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್