ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸದಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆದಿದ್ದು, ಮೂರನೇ ಅಭ್ಯರ್ಥಿ ಗೆಲುವಿನ ಲೆಕ್ಕಾಚಾರದ ಕುರಿತು ಮಹತ್ವದ ಸಮಾಲೋಚನೆ ನಡೆಯಿತು.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ 'ರೇಸ್ ವ್ಯೂ ಕಾಟೇಜ್'ನಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಚುನಾವಣಾ ಉಸ್ತುವಾರಿ ಕಿಶನ್ ರೆಡ್ಡಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಬಹುತೇಕ ಅಸಾಧ್ಯ ಎನ್ನುವ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಶಸ್ತ್ಯದ ಮತಗಳ ಆಧಾರದ ಲಾಭ ಪಡೆದು, ಪಕ್ಷದ ಮೂರನೇ ಅಭ್ಯರ್ಥಿಯನ್ನು ಯಾವ ರೀತಿ ಗೆಲ್ಲಿಸಬೇಕೆಂಬ ಕುರಿತು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಸಂಖ್ಯಾಬಲದ ಆಧಾರದಲ್ಲಿ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಗೆಲುವು ಖಚಿತವಾಗಿದ್ದು, ಲೆಹರ್ ಸಿಂಗ್ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯಸಭೆಗೆ ಹೆಚ್ಚುವರಿ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡ್ಗೆ ಗಿಫ್ಟ್ ಕೊಡಲು ರಾಜ್ಯ ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ನೀಡಲಾಗಿದ್ದ ವಿಪ್ ವಾಪಸ್ ಪಡೆಯಲಾಗಿದ್ದು, ಇಂದು ಸಂಜೆ ನಿರ್ಮಲಾ ಸೀತಾರಾಮನ್ ಶಾಸಕರಿಗೆ ಏರ್ಪಡಿಸಿರುವ ಭೋಜನ ಕೂಟದಲ್ಲೇ ಚಿಕ್ಕ ಸಭೆ ನಡೆಸಿ ಶಾಸಕರಿಗೆ ವಿಪ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ರಾಷ್ಟ್ರ ಭಕ್ತಿಯ ವಿಚಾರವನ್ನು ಯಾರೂ ಸುಡಲು ಆಗಲ್ಲ, ಚಡ್ಡಿ ಸುಡಬಹುದು ಅಷ್ಟೇ : ಸಿ ಟಿ ರವಿ