ಬೆಂಗಳೂರು: ಸಿಡಿ ಪ್ರಕರಣದ ನಂತರ ಬೆಳಗಾವಿ ಸಾಹುಕಾರ ಅಕ್ಷರಶಃ ಏಕಾಂಗಿಯಾಗಿದ್ದಾರೆ. ಬಾಂಬೆ ಟೀಂ ಹೊರತುಪಡಿಸಿದರೆ ಉಳಿದ ಬಿಜೆಪಿ ನಾಯಕರು ಜಾರಕಿಹೊಳಿಯಿಂದ ಅಂತರ ಕಾಯ್ದುಕೊಂಡಿದ್ದು, ಸಮರ್ಥನೆ ಮಾಡಿಕೊಳ್ಳುವುದಿರಲಿ ಕನಿಷ್ಠ ಪ್ರತಿಕ್ರಿಯೆ ಕೂಡ ಕೊಡಲು ಹಿಂದೇಟು ಹಾಕುತ್ತಿದ್ದಾರೆ.
ಹೌದು, ಯುವತಿಯೊಂದಿಗಿನ ವಿಡಿಯೋ ಬಹಿರಂಗವಾದ ನಂತರ ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಈ ಪ್ರಕರಣದ ತನಿಖೆ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಒತ್ತಡಕ್ಕೆ ಮಣಿದು ಹಳೆಯ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದ್ದು, ಬಿಟ್ಟರೆ ಬೇರೆ ಯಾವುದೇ ರೀತಿಯ ಸಮರ್ಥನೆಗೆ ಬಿಜೆಪಿ ನಾಯಕರು ಮುಂದಾಗಿಲ್ಲ.
ಜಾರಕಿಹೊಳಿಯನ್ನು ಸಮರ್ಥಿಸಿಕೊಳ್ಳದ ಬಿಜೆಪಿ ನಾಯಕರು:
ಸಚಿವ ಡಾ. ಸುಧಾಕರ್ ಸೇರಿದಂತೆ ಬಾಂಬೆ ಟೀಂನ ಸದಸ್ಯರು ಫೇಕ್ ಸಿಡಿ ಎಂದು ಜಾರಕಿಹೊಳಿ ಪರ ಆಗೊಮ್ಮೆ ಈಗೊಮ್ಮೆ ಹೇಳಿಕೆ ನೀಡುತ್ತಿರುವುದನ್ನು ಬಿಟ್ಟರೆ ಬಿಜೆಪಿ ಪಾಳಯದಿಂದ ಗಟ್ಟಿಯಾಗಿ ಜಾರಕಿಹೊಳಿ ಪರ ಯಾರೂ ಮಾತನಾಡುತ್ತಿಲ್ಲ. ಆಗೀಗ ಶಾಸಕ ರೇಣುಕಾಚಾರ್ಯ ಮಾತನಾಡುತ್ತಿದ್ದಾರೆ, ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರುತ್ತಿದ್ದ ಇತರರೂ ಮೌನವಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂಗಳು, ಸಚಿವರು ಯಾರೂ ಕೂಡ ಜಾರಕಿಹೊಳಿಯನ್ನು ಸಮರ್ಥನೆ ಮಾಡಿಕೊಂಡಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತ್ರ ತನಿಖೆ ನಡೆಯುತ್ತಿದೆ ಈ ವೇಳೆ ಯಾವುದೇ ಹೇಳಿಕೆ ನೀಡಲ್ಲ, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎನ್ನುತ್ತಿರುವುದು ಬಿಟ್ಟರೆ ಉಳಿದವರು ಫುಲ್ ಸೈಲೆಂಟ್ ಆಗಿದ್ದಾರೆ.
ಇದನ್ನೂ ಓದಿ: ಗುರುನಾನಕ್ ಭವನದ ವಿಶೇಷ ಕೋರ್ಟ್ ಹಾಲ್ನಲ್ಲಿ 'ಸಿಡಿ'ದ ಯುವತಿ ಹಾಜರು
ಪಕ್ಷದ ವಲಯದಲ್ಲಿಯೂ ಅಂತರ ಸ್ಪಷ್ಟವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ನಾಯಕರು ಕೂಡ ಈ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ. ಜಾರಕಿಹೊಳಿ ಪರ ಯಾರೂ ಹೇಳಿಕೆ ನೀಡಿಲ್ಲ, ಸಚಿವರಾಗಲಿ, ಪಕ್ಷದ ನಾಯಕರಾಗಲಿ ಜಾರಕಿಹೊಳಿ ಹೆಸರು ಹೇಳುತ್ತಿದ್ದಂತೆ ಅದರ ಬಗ್ಗೆ ಏನೂ ಮಾತನಾಡಲ್ಲ ಎನ್ನುತ್ತಾ ನಿರ್ಗಮಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿಯೂ ಜಾರಕಿಹೊಳಿ ಪ್ರಕರಣದಲ್ಲಿ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗ್ತಿದೆ. ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಕ್ಕೆ ಸಂದೇಶ ರವಾನಿಸಿದ್ದು, ಪಕ್ಷಕ್ಕೆ ಮಜುಗರವಾಗುವ ಯಾವುದೇ ಘಟನೆಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಬೇಡಿ ಎಂದಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮೂಲಕ ರಾಜ್ಯ ಉಸ್ತುವಾರಿ ಅರುಣ್ ಕುಮಾರ್ಗೆ ಸಂದೇಶ ಬಂದಿದ್ದು, ಅದರಂತೆ ಜಾರಕಿಹೊಳಿ ವಿಚಾರದಲ್ಲಿ ಮೌನವಾಗಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗ್ತಿದೆ.
ಸಾಥ್ ನೀಡದ ಹೈಕಮಾಂಡ್:
ಹೈಕಮಾಂಡ್ ನಾಯಕರೂ ಜಾರಕಿಹೊಳಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿಡಿ ಬಹಿರಂಗವಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ದೆಹಲಿ ವಿಮಾನ ಏರಲು ಮುಂದಾಗಿದ್ದರು. ಆದರೆ ಭೇಟಿಗೆ ರಾಷ್ಟ್ರೀಯ ನಾಯಕರು ಅನುಮತಿ ನಿರಾಕರಿಸಿದರು. ಹಾಗಾಗಿ ಪ್ರವಾಸ ರದ್ದುಗೊಳಿಸಿದ ಜಾರಕಿಹೊಳಿ ಮಾರನೇ ದಿನವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಸಿಡಿ ಲೇಡಿ ಕೋರ್ಟ್ಗೆ ಹಾಜರ್: ರಮೇಶ್ ಜಾರಕಿಹೊಳಿ ದಿಢೀರ್ ಅಜ್ಞಾತ ಸ್ಥಳಕ್ಕೆ?
ಜಾರಕಿಹೊಳಿ ರಾಜೀನಾಮೆ ನಂತರ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಆರೋಪ ಬಂದಾಗ ಹಿಂದೆ ಮುಂದೆ ನೋಡದೆ, ರಾಜೀನಾಮೆ ನೀಡಿ ಎಂದು ಹೇಳುವ ಮೊದಲೇ ರಾಜೀನಾಮೆ ನೀಡುವ ಪದ್ಧತಿ ಬಿಜೆಪಿಯಲ್ಲಿ ಮಾತ್ರ ಇದೆ ಎನ್ನುತ್ತಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಜಾರಕಿಹೊಳಿ ಪರ ನಿಲ್ಲಲಿಲ್ಲ ಅಥವಾ ಸಮರ್ಥನೆಗೂ ಮುಂದಾಗಲಿಲ್ಲ.
ಏಕಾಂಗಿ ಹೋರಾಟ:
ಬಿಜೆಪಿ ಪಕ್ಷ ಹಾಗು ಸಂಪುಟ ಸಹೋದ್ಯೋಗಿಗಳಿಂದ ಬೆಂಬಲ ಸಿಗುವ ನಿರೀಕ್ಷೆ ಹುಸಿಯಾದರೂ ಏಕಾಂಗಿಯಾಗಿ ಕಾನೂನು ಹೋರಾಟಕ್ಕೆ ರಮೇಶ್ ಜಾರಕಿಹೊಳಿ ಸಜ್ಜಾಗಿದ್ದಾರೆ. ಯುವತಿ ಅಂದೇ ದೂರು ಕೊಡಬೇಕಿತ್ತು, ಇಷ್ಟು ದಿನ ಬಿಟ್ಟು ಈಗ ಏಕೆ ದೂರು ಕೊಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಲ್ಲಾ ಗೊತ್ತು, ರೇಪ್ ಕೇಸ್ ಹಾಕಲು ಹೊರಟಿದ್ದಾರೆ. ನನಗೂ ಕಾನೂನು ಗೊತ್ತಿದೆ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ. ಪಕ್ಷ ಹಾಗೂ ಸರ್ಕಾರದ ಸಾಥ್ ಇಲ್ಲದೇ ಕಾನೂನು ಹೋರಾಟಕ್ಕೆ ಧುಮುಕಿದ್ದಾರೆ.
ಒಂದು ಕಡೆ ರಾಜ್ಯ ಬಿಜೆಪಿ ಘಟಕದ ಬೆಂಬಲವಿಲ್ಲ, ಮತ್ತೊಂದು ಕಡೆ ಮಂತ್ರಿ ಮಂಡಲದ ಸಾಥ್ ಇಲ್ಲ. ಇನ್ನೊಂದೆಡೆ ಹೈಕಮಾಂಡ್ ಅಭಯವೂ ಇಲ್ಲದೆ, ಜಾರಕಿಹೊಳಿ ಸಿಡಿ ಪ್ರಕರಣದ ನಂತರ ಏಕಾಂಗಿಯಾಗಿದ್ದಾರೆ. ಕುಟುಂಬ ಸದಸ್ಯರು ಕೆಲ ಆಪ್ತರು ಹೊರತುಪಡಿಸಿದರೆ ಬೇರೆ ಯಾವ ಕೇಸರಿ ನಾಯಕರ ಬೆಂಬಲವಿಲ್ಲದಂತಾಗಿದೆ.