ಬೆಂಗಳೂರು : ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರಿಂದ ವಶಪಡಿಸಿಕೊಂಡಿರುವ ಮೊತ್ತ ಸರ್ಕಾರದ ಮೇಲಿನ 40% ಕಮಿಷನ್ ಆರೋಪಕ್ಕೆ ಪುಷ್ಟಿ ನೀಡುವ ರೀತಿಯಲ್ಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ರಾಜ್ಯದ ಹಲವು ಕಡೆ ಇಂದು ಲೋಕಾಯುಕ್ತ ದಾಳಿಯಾಗಿದೆ. ಹಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ನೆಲಮಂಗಲದಲ್ಲಿ 5 ಎಕರೆ ಜಮೀನು, ಮಲ್ಲೇಶ್ವರದಲ್ಲಿ ಮೂರು ನಿವೇಶನ, ಕೋಟಿ ಗಟ್ಟಲೆ ಹಣ, ಒಡವೆಗಳು ಸಿಕ್ಕಿವೆ. ಅಧಿಕಾರಿಗಳ ಬಳಿ ಇಷ್ಟೊಂದು ಆಸ್ತಿ ಮತ್ತು ಹಣ ಹೇಗೆ ಬಂತು? ಭ್ರಷ್ಟಾಚಾರದಿಂದ ಇಷ್ಟು ಹಣ ಮಾಡೋಕೆ ಹೇಗೆ ಸಾಧ್ಯ? ಇದೆಲ್ಲವೂ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ. ಸರ್ಕಾರದ 40% ಕಮೀಷನ್ ಆರೋಪಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.
ಇಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಒಬ್ಬ ಎಸಿ ಇಷ್ಟೊಂದು ಹಣ ಮಾಡಿದ್ದಾರೆ ಅಂದ್ರೆ ಹೇಗೆ?. ಇದೊಂದು ನಿಜಕ್ಕೂ ಆಶ್ವರ್ಯಕರ ವಿಷಯ. ಇದೆಲ್ಲದಕ್ಕೂ ಸರ್ಕಾರದ ಕುಮ್ಮಕ್ಕಿದೆ ಎಂದು ಸರ್ಕಾರದ ವಿರುದ್ಧ ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು. ಇದು ಮತ್ತೊಂದು ಸ್ಕ್ಯಾಮ್, ಮತ್ತೊಂದು ಕರಪ್ಷನ್, ಮತ್ತೊಂದು ಗೋಲ್ಮಾಲ್. ರಾಜ್ಯದಲ್ಲಿ ಸರ್ಕಾರ ಕರಪ್ಟ್ ಆಗಿದೆ. ಮತ್ತೊಂದು ರೈಡ್ ಆಗಿದೆ. ಮತ್ತೊಬ್ಬ ವಿರೂಪಾಕ್ಷಪ್ಪ ಸಿಕ್ಕಿ ಬಿದ್ದಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
5 ಸೈಟ್, 1 ಕೋಟಿ ಬೆಲೆ ಬಾಳುವ ಚಿನ್ನದ ಒಡವೆಗಳು. ಮಲ್ಲೇಶ್ವರಂನಲ್ಲಿ ಕಮರ್ಶಿಯಲ್ ಸೈಟ್, ಜೊತೆಗೆ 1.4 ಕೋಟಿ ಹಣ. ಎಲ್ಲಾ ಸೇರಿದಂತೆ ಬಹಳಷ್ಟು ವಸ್ತುಗಳು ಸಿಕ್ಕಿವೆ. ಎಲ್ಲರಿಗೂ ಇದು ಶಾಕಿಂಗ್ ನ್ಯೂಸ್. ಒಬ್ಬ ಬಿಬಿಎಂಪಿ ಅಧಿಕಾರಿಗೆ ಇಷ್ಟು ಹಣ ಮಾಡುತ್ತಾರೆ ಅಂದರೆ ಏನರ್ಥ. ಇನ್ನು ಸರ್ಕಾರದಲ್ಲಿರುವವರು ಎಷ್ಟು ಹಣ ಮಾಡಿದ್ದಾರೆ ಎಂದು ಬಿಎಂಎಂಪಿ ಅಧಿಕಾರಿ ಗಂಗಾಧರಯ್ಯ ಮನೆ ಮೇಲೆ ರೈಡ್ ಆಗಿರುವ ಫೋಟೋವನ್ನು ಪ್ರದರ್ಶಿಸಿದರು.
ಬಿಜೆಪಿ ನಾಯಕರು ಚುನಾವಣಾ ಸಮಯದಲ್ಲಿ ಹಣ ಹಂಚುತ್ತಿದ್ದಾರೆ. ಈ ಹಣ ಎಲ್ಲಿಂದ ಬಂತು ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿಯವರು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನರಿಗೆ ಎಲ್ಲಾ ಗೊತ್ತಿದೆ. ಈ ಸರ್ಕಾರ ಸಂಪೂರ್ಣ ಕರಪ್ಟ್ ಆಗಿದೆ. ರಾಜ್ಯದ ಜನ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು.
ನಾವು ಮೊದಲಿನಿಂದ ಹೇಳ್ತಾನೇ ಬಂದಿದ್ಧೇವೆ. 40% ಕಮಿಷನ್ ಸರ್ಕಾರ ಎಂದು ಹೇಳಿದ್ದೇವೆ. ಪ್ರತಿದಿನ ಐಟಿ ರೇಡ್, ಇಡಿ ರೇಡ್ ಅಂತಿದ್ದೇವೆ. ಎಲ್ಲಿ ಈ ರಾಜ್ಯದಲ್ಲಿ ಅದು ಯಾವುದು ಕಾಣಿಸುತ್ತಿಲ್ಲ. ಪ್ರತಿದಿನ ಎಷ್ಟೊಂದು ಹಣ ವರ್ಗಾವಣೆಯಾಗುತ್ತಿದೆ. ಯಾಕೆ ಐಟಿ, ಇಡಿಗಳು ಸುಮ್ಮನಿವೆ. ಅವರಿಗೆ ಇದರ ಬಗ್ಗೆ ಗೊತ್ತಿಲ್ವೇ? ಸರ್ಕಾರ ಇಷ್ಟು ದೊಡ್ಡ ಭ್ರಷ್ಟ ಸರ್ಕಾರ ಆದ್ರೆ ಹೇಗೆ? ಎಂದು ಪ್ರಶ್ನಿಸಿದರು. ರಾಜ್ಯ ಜನ ಇದನ್ನು ನೋಡುತ್ತಿದ್ದಾರೆ.ಇದು ಭ್ರಷ್ಟ ಸರ್ಕಾರ ಎಂದು ಅವರಿಗೂ ಗೊತ್ತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವೇಣುಗೋಪಾಲ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಎನ್ಐಎಯಿಂದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನಿಗೆ ಶಾಕ್.. ಇಬ್ಬರು ಪುತ್ರರ ಆಸ್ತಿ ಮುಟ್ಟುಗೋಲು