ಬೆಂಗಳೂರು: ಕಾನೂನು ಬಾಹಿರವಾಗಿ ಹಲಾಲ್ ಪ್ರಮಾಣಪತ್ರ ನೀಡುತ್ತಿದ್ದು, ಇದನ್ನು ತಡೆಯಲು ಹಲಾಲ್ ವಿಚಾರವಾಗಿ ಖಾಸಗಿ ಬಿಲ್ ಮಂಡಿಸಲು ಸಭಾಪತಿಗೆ ಪತ್ರ ಬರೆದಿದ್ದೇನೆ. ಸಭಾಪತಿ ಅವಕಾಶ ನೀಡಿದರೆ ನಾನು ಅಧಿವೇಶನದಲ್ಲಿ ಖಾಸಗಿ ಬಿಲ್ ಮಂಡಿಸುತ್ತೇನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲಾಲ್ ಮುದ್ರೆ ಹಾಕುವ ಪದ್ದತಿ ಕೇವಲ ಮಾಂಸಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಆಸ್ಪತ್ರೆ, ಅನೇಕ ಖಾದ್ಯ, ಬೇರೆ ಬೇರೆ ಕಡೆಗಳಲ್ಲೂ ಹಲಾಲ್ ಮುದ್ರೆ ಇದೆ. ಪ್ರಮಾಣಪತ್ರ ಕೊಡಲು ಇವರು ಯಾರು ಎಂದು ಪ್ರಶ್ನಿಸಿದರು.
ಹಲಾಲ್ ವಿರುದ್ಧ ಖಾಸಗಿ ಬಿಲ್ ಮಂಡನೆ : ಇವರು ಸರ್ಟಿಫಿಕೇಟ್ ನೀಡಿದರೆ ಫುಡ್ ಡಿಪಾರ್ಟ್ಮೆಂಟ್ನ ಕೆಲಸ ಏನು?. ಫುಡ್ ಸರ್ಟಿಫಿಕೇಟ್ ನೀಡುವುದು ಫುಡ್ ಡಿಪಾರ್ಟ್‌ಮೆಂಟ್ ಆದರೆ, ಹಲಾಲ್ ಸರ್ಟಿಫಿಕೇಟ್ ನೀಡಲು ಮುಂದಾದರೆ ಆಹಾರ ಇಲಾಖೆ ಕೆಲಸ ಏನು?. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸರಿಸುಮಾರು ಐದು ಸಾವಿರ ಕೋಟಿ ನಷ್ಟ ಆಗುತ್ತಿದೆ. ನಾನು ಅನೇಕ ಕಾನೂನು ತಜ್ಞರು, ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ. ಹಲಾಲ್ ಸರ್ಟಿಫಿಕೇಟ್ ನೀಡುವ ಸಂಸ್ಥೆ ಕಾನೂನು ವಿರೋಧಿಯಾಗಿದ್ದು, ಇದನ್ನು ಸಂಸದರ ಗಮನಕ್ಕೂ ತರುತ್ತೇನೆ ಎಂದರು.
ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ : ಹಲಾಲ್ಗೆ ಮುಖ್ಯ ಅಥಾರಿಟಿ ಏನು? ಹಲಾಲ್ ಸಂಸ್ಥೆಯ ವ್ಯಾಪ್ತಿ ಎಷ್ಟು? ಕಿರಾಣಿ ಅಂಗಡಿ ಪದಾರ್ಥಗಳ ಮೇಲೆ ಹಲಾಲ್ ಪ್ರಮಾಣಪತ್ರ ನೀಡುತ್ತಾರೆ. ಆಸ್ಪತ್ರೆಗೂ ಹಲಾಲ್ ಪ್ರಮಾಣಪತ್ರ ನೀಡುತ್ತಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಆಗ್ತಾ ಇದೆ. ತೆರಿಗೆ ಮೂಲಕ ಬರಬೇಕಾದ ಹಣ ತಪ್ಪಿ ಹೋಗುತ್ತಿದೆ ಎಂದು ಮಾಹಿತಿ ನೀಡಿದರು.
ಹಲಾಲ್ ಪ್ರಮಾಣ ಪತ್ರಗಳನ್ನು ನೀಡುವ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳು ಎಂದು ನೋಂದಣಿ ಆಗಿವೆ. ಧಾರ್ಮಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ಇರುವುದಿಲ್ಲ. ಈ ಧಾರ್ಮಿಕ ಸಂಸ್ಥೆಗಳು ಪ್ರಮಾಣ ಪತ್ರ ನೀಡುವ ಕುರಿತು ಸರಕಾರದಿಂದ ಯಾವುದೇ ರೀತಿಯ ಅನುಮತಿ ಪಡೆದಿರುವುದಿಲ್ಲ.
ಸರ್ಕಾರ ಯಾವುದೇ ಖಾಸಗಿ ಅಥವಾ ಧಾರ್ಮಿಕ ಅಥವಾ ಯಾವುದೇ ವ್ಯಕ್ತಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರವನ್ನು ಕೊಟ್ಟಿರುವುದಿಲ್ಲ. ವಸ್ತುಗಳಿಗೆ ಎಫ್ಎಸ್ಎಸ್ಎಐ ಹೊರತುಪಡಿಸಿ ಬೇರೆ ಯಾರೂ ಈ ರೀತಿಯ ಪ್ರಮಾಣ ಪತ್ರವನ್ನೂ ನೀಡುವಂತಿಲ್ಲ. ನೀಡಿದಲ್ಲಿ ಅಥವಾ ಪಡೆದಲ್ಲಿ ಅಪರಾಧ. ಹೀಗಾಗಿ ನಾನು ಸದನದಲ್ಲಿ ಖಾಸಗಿ ಬಿಲ್ ಮಂಡಿಸುತ್ತೇನೆ ಎಂದರು.
ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಕಡುಬು ತಿಂತಿದ್ರಾ?: ಒಳಮೀಸಲಾತಿಗೆ ಸಂಪುಟ ಉಪಸಮಿತಿ ರಚನೆ ಮಾಡಿದ್ದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ, ಸದಾಶಿವ ಆಯೋಗದ ವರದಿ ಬಗ್ಗೆ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಒಮ್ಮೆಯೂ ಮಾತನಾಡಲಿಲ್ಲ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಕಡುಬು ತಿಂತಿದ್ರಾ? ಎಂದು ಪ್ರಶ್ನಿಸಿದರು.
ಈಗ ನಾವು ಉಪಸಮಿತಿ ಮಾಡಿದ್ದೇವೆ ಇದರ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಅವರು ಸಿಎಂ ಆಗಿದ್ದಾಗ ಒಳಮೀಸಲಾತಿ ಬಗ್ಗೆ ಮಾತಾಡಲಿಲ್ಲ. ಅವರು ಸಿಎಂ ಆಗಿದ್ದಾಗ ವರದಿಯನ್ನು ಸದನದಲ್ಲಿ ಮಂಡನೆ ಮಾಡಲಿಲ್ಲ. ಸಮಿತಿಯನ್ನೂ ಸಿದ್ದರಾಮಯ್ಯ ರಚನೆ ಮಾಡಲಿಲ್ಲ. ಈಗ ಅಧಿಕಾರಕ್ಕೆ ಬರಲು ಮಾತನಾಡುತ್ತಿದ್ದಾರೆ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದರು.
ಬಿಎಸ್ವೈ ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಜೆ.ಪಿ ನಡ್ಡಾ ಆಗಮಿಸುತ್ತಿರೋ ಕಾರ್ಯಕ್ರಮಕ್ಕೆ ಯಡಿಯೂರಪ್ಪಗೆ ಆಹ್ವಾನ ಇಲ್ಲ. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಷಯ. ನಾನೇ ಯಡಿಯೂರಪ್ಪ ಜೊತೆ ಮಾತನಾಡಿ ಬಂದಿದ್ದೇನೆ. ಡಿ.16ರಂದು ಪಾಂಡವಪುರ ಹಾಗೂ ಮದ್ದೂರಿನಲ್ಲಿ ಜನಸಂಕಲ್ಪ ಸಮಾವೇಶ ಇದೆ. ಯಡಿಯೂರಪ್ಪ, ಗೋಪಾಲಯ್ಯ, ನಾರಾಯಣ ಗೌಡ ಎಲ್ಲರೂ ಆಗಮಿಸಲಿದ್ದಾರೆ.
ನಮ್ಮ ಅಧ್ಯಕ್ಷರೇ ಹೋಗಿ ಯಡಿಯೂರಪ್ಪ ಜೊತೆ ಮಾತನಾಡಿ ಬಂದಿದ್ದಾರೆ. ಯಡಿಯೂರಪ್ಪ ಅವರನ್ನು ಕಡೆಗಣಿಸೋ ಪ್ರಶ್ನೆಯೇ ಇಲ್ಲ ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಒಳಮೀಸಲಾತಿ: ಕಾಂಗ್ರೆಸ್‌ನಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ- ಸಚಿವ ಅಶೋಕ್