ಬೆಂಗಳೂರು : ಈ ದೇಶದಲ್ಲಿ ಅಧಿಕಾರ ದುರುಪಯೋಗ ಆಗ್ತಿದೆ. ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಕಾಂಗ್ರೆಸ್ ಧಿಕ್ಕರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರ ಹಾಕಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಬೇರೆ ದಾರಿ ಹಿಡಿದಿದೆ.
ನಮ್ಮ ರಾಷ್ಟ್ರೀಯ ನಾಯಕರಿಗೆ ಇಡಿ ನೋಟಿಸ್ ನೀಡಿ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅರ್ಧ ಗಂಟೆ, ಒಂದು ಗಂಟೆ ನಡೆಸಬಹುದಾದ ವಿಚಾರಣೆಯನ್ನು ಏಳೆಂಟು ಗಂಟೆ ನಡೆಸಿದ್ದು ಎಷ್ಟು ಸರಿ?. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗುವ ಅವಕಾಶ ಇದ್ದರೂ, ಬೇರೆಯವರಿಗೆ ಅವಕಾಶ ನೀಡಿದರು. ನ್ಯಾಷನಲ್ ಹೆರಾಲ್ಡ್ ಒಂದು ಸ್ವಾತಂತ್ರ್ಯ ಹೋರಾಟದ ದ್ವನಿಯಾಗಿ ಕಾರ್ಯ ನಿರ್ವಹಿಸಿತ್ತು.
ರಾಷ್ಟ್ರೀಯ ಆಂದೋಲನವಾಗಿ ಇದು ಕಾರ್ಯ ನಿರ್ವಹಿಸಿತ್ತು. ಇದು ಗಾಂಧಿ ಕುಟುಂಬದ್ದಲ್ಲ. ಕಾಂಗ್ರೆಸ್ಸಿಗರು ತಮ್ಮ ದನಿಯಾಗಿ ಇದನ್ನು ಪೋಷಿಸಿಕೊಂಡು ಬಂದಿದ್ದರು. ಇದಕ್ಕೆ ಅದರದ್ದೇ ಆಸ್ತಿ ಇತ್ತು. ಆದರೆ, ದುಸ್ಥಿತಿಗೆ ತಲುಪಿ ಆಸ್ತಿ ಮಾರುವ ಸ್ಥಿತಿ ತಲುಪಿದಾಗ 90 ಕೋಟಿ ರೂ. ಸಾಲ ನೀಡಿ ಉಳಿಸಿಕೊಳ್ಳಲಾಯಿತು ಎಂದು ವಿವರಿಸಿದರು.
ಇದನ್ನ ಮನಿ ಲಾಂಡ್ರಿಂಗ್ ಎನ್ನುತ್ತಿದ್ದಾರೆ. ಆದರೆ, ಎಲ್ಲಾ ಬಿಳಿ ಹಣ, ಪಾರದರ್ಶಕ ಪ್ರಕ್ರಿಯೆಯಲ್ಲಿ ಹಣ ವಿನಿಮಯ ಮಾಡಿದ್ದೇವೆ. ರಾಹುಲ್ ಹಾಗೂ ಸೋನಿಯಾ ಗಾಂಧಿ ತಲಾ 36% ಹಣ ಹಂಚಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ತಲೆಯಲ್ಲಿ ಸಗಣಿ ತುಂಬಿಕೊಂಡಿರುವ ರಾಜ್ಯದ ಬಿಜೆಪಿ ನಾಯಕರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅಲಹಾಬಾದ್ ಮನೆಯ ಬೆಲೆ 20 ಸಾವಿರ ಕೋಟಿ ರೂ. ಅದರೆ ಅದನ್ನು ಮ್ಯೂಸಿಯಂ ಮಾಡಲು ಉಚಿತವಾಗಿ ನೀಡಿದ್ದಾರೆ ಎಂದರು.
ಜೈಲಿಗೆ ಕಳಿಸುವ ಬೆದರಿಕೆಯನ್ನು ತನಿಖಾ ಸಂಸ್ಥೆ ಮೂಲಕ ಮಾಡುತ್ತಿದ್ದಾರೆ, ನಾವು ಹೆದರಲ್ಲ. ಹೋರಾಟ ನಮ್ಮ ಹಕ್ಕು, ತಡೆಯುವುದು ಸರಿಯಲ್ಲ. ಕಾಂಗ್ರೆಸ್ ಕಚೇರಿ ನಮ್ಮ ದೇವಾಲಯ, ಅಲ್ಲಿಗೆ ಹೋಗಲು ಬಿಡಲಿಲ್ಲ ಅಂದರೆ ಏನಿದು, ಏನು ಮಾಡಲು ಹೊರಟಿದ್ದೀರಾ? ಇದನ್ನು ಖಂಡಿಸಿ ಜನರ ಮುಂದೆ ನಿಲ್ಲಲು ಬಯಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ನಾಯಕರನ್ನು ದನಗಳನ್ನು ಎಳೆದುಕೊಂಡು ಹೋದಂತೆ ಹೋಗುತ್ತಿದ್ದಾರೆ. ನಮ್ಮ ನಾಯಕರು ಏನು ಮಾಡಿದ್ದಾರೆ. ನಾಚಿಕೆಗೇಡು ರಾಜಕಾರಣ ಬಿಜೆಪಿ ಮಾಡುತ್ತಿದೆ. ನಾಳೆ ನಾವು ಕಾಂಗ್ರೆಸ್ ಕಚೇರಿಯಿಂದ ರಾಜಭವನಕ್ಕೆ ಪಾದಯಾತ್ರೆ ತೆರಳಿ ಮುತ್ತಿಗೆ ಹಾಕುತ್ತೇವೆ. ಇನ್ನು ಶುಕ್ರವಾರ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಹೋರಾಟ ಕೈಗೊಳ್ಳುವಂತೆ ಕರೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ನಾಳೆಯಿಂದ ಸಿಇಟಿ: ಗ್ಯಾಜೆಟ್ ತರುವಂತಿಲ್ಲ-ತಲೆ, ಕಿವಿ ಮುಚ್ಚುವ ಬಟ್ಟೆ ಧರಿಸುವಂತಿಲ್ಲ