ಬೆಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರದ ನೂತನ ಸಚಿವರನ್ನು ಪರಿಚಯಿಸಲು ಪ್ರಧಾನಿಗೆ ಅವಕಾಶ ನೀಡದೆ ಕಾಂಗ್ರೆಸ್ ಅಡ್ಡಿಪಡಿಸಿದ್ದರಿಂದ ನೂತನ ಸಚಿವರನ್ನು ಜನರಿಗೆ ಪರಿಚಯಿಸಲು ಆಗಸ್ಟ್ 16ರಿಂದ 19ರವರೆಗೆ 'ಜನಾಶೀರ್ವಾದ ಯಾತ್ರೆ' ನಡೆಸಿ ಸಚಿವರನ್ನು ನೇರವಾಗಿ ಜನರಿಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ದೇಶದ ಉದ್ದಗಲಕ್ಕೆ ಜನಾಶೀರ್ವಾದ ಯಾತ್ರೆ ತೆರಳುತ್ತಿದೆ. ರಾಜ್ಯದಲ್ಲಿಯೂ ನಾಲ್ಕು ತಂಡಗಳು ಸಂಚರಿಸುತ್ತಿವೆ. ಸಚಿವರಾದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಅವರ ನೇತೃತ್ವದಲ್ಲಿ ಈ ತಂಡಗಳು ಪ್ರವಾಸ ಮಾಡುತ್ತಿವೆ.
ಸಚಿವ ನಾರಾಯಣಸ್ವಾಮಿ ತಮ್ಮ ಕ್ಷೇತ್ರದ ಸುತ್ತಮುತ್ತಲ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಗದಗದಲ್ಲಿ ಯಾತ್ರೆ ನಡೆಸುತ್ತಿದ್ದು, ಶೋಭಾ ಕರಂದ್ಲಾಜೆ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಯಾತ್ರೆ ನಡೆಸುತ್ತಿದ್ದಾರೆ. ಇನ್ನು ರಾಜೀವ್ ಚಂದ್ರಶೇಖರ್ ಹುಬ್ಬಳ್ಳಿ, ಶಿರಸಿ, ಶಿವಮೊಗ್ಗ, ಮಂಗಳೂರು, ಕೊಡಗು, ಬೆಂಗಳೂರಿನಲ್ಲಿ ಮತ್ತು ಭಗವಂತ ಖೂಬಾ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಯಲ್ಲಿ ಯಾತ್ರೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ನರೇಂದ್ರ ಮೋದಿ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳು, ರೈತರ ಆದಾಯ ದ್ವಿಗುಣ, ದೀನದಲಿತರು, ಬಡವರ ಅಭ್ಯುದಯಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಯಾತ್ರೆಯಲ್ಲಿ ಪರಿಚಯಿಸಲಾಗುತ್ತಿದೆ. ಲಸಿಕಾ ಕೇಂದ್ರ, ರೇಷನ್ ಅಂಗಡಿಗಳಿಗೆ ಈ ಯಾತ್ರೆ ಭೇಟಿ ಕೊಡುತ್ತಿದೆ. ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿ ಗೊಬ್ಬರ ಸರಿಯಾಗಿ ಸಿಗುತ್ತಿದೆಯೇ ಎಂದು ಮಾಹಿತಿ ಪಡೆಯುತ್ತಿದೆ.
ಸಾಹಿತಿಗಳು, ಗಡಿ ಕಾಯುವ ಯೋಧರ ಮನೆ, ಗಣ್ಯ ವ್ಯಕ್ತಿಗಳ ಮನೆ, ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕರ ಮನೆಗಳಿಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆಯಲಾಗುತ್ತಿದೆ.
ಬೆಂಗಳೂರಿನಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆ:
ಯಾತ್ರೆಯ ಕಡೆಯ ದಿನವಾದ ಇಂದು ಬೆಂಗಳೂರಿನಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಅವರ ಜನಾಶೀರ್ವಾದ ಯಾತ್ರೆ ನಡೆಯಲಿದ್ದು ಸ್ಥಳೀಯ ಸಂಸದರು, ಸಚಿವರು, ಶಾಸಕರು, ಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ಮೋರ್ಚಾ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಸಂಚಾಲಕರು ಸಹ ಸಂಚಾಲಕರು ಭಾಗಿಯಾಗಲಿದ್ದಾರೆ.
ಬೆಳಗ್ಗೆ 8.30ಕ್ಕೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮೂಲಕ ಜನಾಶೀರ್ವಾದ ಯಾತ್ರೆ ಆರಂಭಗೊಳ್ಳಲಿದೆ. 9 ಗಂಟೆಗೆ ಜಯನಗರ ಸೌತ್ ಎಂಡ್ ಸರ್ಕಲ್ನಲ್ಲಿ ಪೈ ವಿಸ್ತಾ ಹೋಟೆಲ್ನಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗುತ್ತದೆ. 10 ಗಂಟೆಗೆ ಕಾರ್ಪೊರೇಷನ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ. 10:45 ಜ್ಞಾನಜ್ಯೋತಿ ಸಭಾಂಗಣದ ಹಾಲ್ನಲ್ಲಿ ರಾಜೀವ್ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಲಿದ್ದು, 11.30 ಜನಾಶೀರ್ವಾದ ಯಾತ್ರೆಯ ಸಭಾ ಕಾರ್ಯಕ್ರಮ ನಡೆಯಲಿದೆ.