ಬೆಂಗಳೂರು: ಸಿದ್ದರಾಮಯ್ಯ ಅವರ ಸಿಡಿ ಪುರಾಣ ಇವತ್ತಿನದಲ್ಲ, ಇಂತಹ ಹತ್ತು ಸಿಡಿ ಬಿಡುಗಡೆ ಮಾಡಿದರೂ ಬಿಜೆಪಿ ಹೆದರಲ್ಲವೆಂದು ಸಿಡಿ ಬಿಡುಗಡೆ ಮಾಡಿ ಕೋರ್ಟ್ಗೆ ಹೋದ ಕೈ ನಾಯಕರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸವಾಲು ಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಶಾಂತಿವನದಲ್ಲಿ ಕುಳಿತು ಸಿದ್ದರಾಮಯ್ಯ ಏನು ಹೇಳಿದ್ದರು? ಯಾರು ರೆಕಾರ್ಡ್ ಮಾಡಿದರು ಅಂತಾನೇ ಗೊತ್ತಿಲ್ಲದ ಅನಾಥ ಸಿಡಿಗಳು ಹೇಗೆ ಕೋರ್ಟ್ನಲ್ಲಿ ಸಾಕ್ಷಿಯಾಗಲು ಸಾಧ್ಯ ಎಂದು ಪ್ರಶ್ನಿಸಿದರು.
ಇಂದು ನಾವು ಅಧಿಕಾರಕ್ಕೆ ಬರಲು ಕಾಂಗ್ರೆಸ್- ಜೆಡಿಎಸ್ ಕಾರಣವೇ ಹೊರತು, ಬಿಜೆಪಿ ಅಲ್ಲ. ಈಗಾಗಲೇ ಕೋರ್ಟ್ನಲ್ಲಿ ವಾದ ಮುಗಿದು ತೀರ್ಪು ಮಾತ್ರ ಬಾಕಿ ಇದೆ. ಕಾಂಗ್ರೆಸ್ನವರು ಹೇಳುತ್ತಿರುವುದಕ್ಕಿಂತ ಹೆಚ್ಚು ವಾದ ಈಗಾಗಲೇ ಕೋರ್ಟ್ನಲ್ಲಿ ನಡೆದಿದೆ. ಇದಕ್ಕೆಲ್ಲಾ ಯಡಿಯೂರಪ್ಪ ಸೊಪ್ಪು ಹಾಕುವುದಿಲ್ಲ. ವಕೀಲರಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾನೂನು ಜ್ಞಾನ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದು ರವಿಕುಮಾರ್ ಟೀಕಿಸಿದರು.
ಅನರ್ಹ ಶಾಸಕರು ಮುಂಬೈನಲ್ಲಿ ಇದ್ದಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮಾತ್ರ ಅಲ್ಲ ಇಡೀ ಪ್ರಪಂಚಕ್ಕೇ ಗೊತ್ತಿದೆ. ಈ ರೀತಿ ಸುಳ್ಳು ಹೇಳುವ ಬದಲು ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡಿ ಎಂದು ರವಿಕುಮಾರ್ ಅವರು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಬಿಜೆಪಿಗೂ ಅನರ್ಹ ಶಾಸಕರಿಗೂ ಸಂಬಂಧ ಇಲ್ಲ. ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಬಿಜೆಪಿಯು ಅನರ್ಹ ಶಾಸಕರ ಬಗ್ಗೆ ಮಾತನಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.