ಬೆಂಗಳೂರು: ಲಂಬಾಣಿ ಸಮುದಾಯದ ನಾಯಕರನ್ನು ಬಿಜೆಪಿಯವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಲಂಬಾಣಿ ಸಮುದಾಯದ ಕೈ ನಾಯಕರು ಕರೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಅವರದೇ ಪಕ್ಷದವರು ಷಡ್ಯಂತ್ರ ಮಾಡಿದಂತೆ ಕಾಣುತ್ತದೆ. ಯಡಿಯೂರಪ್ಪ ಕೇಸ್ ಮಾಡಬೇಡಿ ಅಂದರೂ ಕೂಡ ಯಡಿಯೂರಪ್ಪ ಮಾತಿಗೆ ಬೆಲೆ ನೀಡಿಲ್ಲ. ಯಡಿಯೂರಪ್ಪ ಹೇಳಿದ ಮೇಲೂ 150 ಜನರ ಮೇಲೆ ಪೊಲೀಸರು ಕೇಸ್ ಮಾಡಿದ್ದಾರೆ ಎಂದು ದೂರಿದರು.
ಗೃಹ ಸಚಿವರು ಅದೇ ಜಿಲ್ಲೆಯವರು. ಮಾಜಿ ಸಿಎಂ ಅದೇ ಜಿಲ್ಲೆಯವರು. ಅವರಿಗೆ ಇಂಟಿಲಿಜೆನ್ಸ್ ಮಾಹಿತಿ ಇರಲಿಲ್ವಾ? ಅವರೇನು ಮಾಡುತ್ತ ಇದ್ರೂ? ಯಡಿಯೂರಪ್ಪ ಏನು ಸಿಎಂ ಆಗಿದ್ದಾರಾ? ಅವರ ಮನೆ ಮೇಲೆ ಯಾಕೆ ನಮ್ಮ ಸಮುದಾಯ ದಾಳಿ ಮಾಡುತ್ತದೆ? ಎಂದು ಪ್ರಶ್ನಿಸಿದರು. ನಿನ್ನೆ ತಪ್ಪು ತಿಳಿವಳಿಕೆ ನಮ್ಮ ಜನಾಂಗದವರಿಗೆ ಆಗಿದೆ. ತಹಸೀಲ್ದಾರಗೆ ಮನವಿ ಕೊಡಲು ಸಮುದಾಯ ಹೋಗಿತ್ತು. 40 ಸಾವಿರ ಜನರು ಸೇರಿದ್ರು. ತತ್ಕ್ಷಣಕ್ಕೆ ಆದ ಘಟನೆ ಅದು. ನಿನ್ನೆ ಆಗಿರುವ ಘಟನೆಗೆ ಸರ್ಕಾರದ ವೈಫಲ್ಯ ಕಾರಣ ಎಂದು ತೀವ್ರ ವಾಗ್ದಾಳಿ ನಡೆಸಿದರು.
ತರಾತುರಿ ಮೀಸಲಾತಿ ವರದಿ ಜಾರಿ: ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಪಿಟಿ ಪರಮೇಶ್ವರ ನಾಯಕ್, ರಾಜ್ಯ ಸರ್ಕಾರ ಬಹಳ ತರಾತುರಿಯಲ್ಲಿ ನ್ಯಾ ಸದಾಶಿವ ಆಯೋಗದ ವರದಿ ಜಾರಿಗೆ ತಂದಿದೆ. ಸರ್ಕಾರ ವರದಿಯನ್ನು ಒಪ್ಪಿಕೊಂಡಿದೆಯೋ ಇಲ್ವೋ ಮಾಹಿತಿಯೇ ಇಲ್ಲ. ಒಳಮೀಸಲಾತಿ ತೀರ್ಮಾನ ದುರ್ದೈವ ಎಂದು ಆರೋಪಿಸಿದರು.
101 ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಚರ್ಚೆ ಮಾಡದೆಯೇ ನಿರ್ಧಾರ ಕೈಗೊಂಡಿದೆ. 101 ಸಮುದಾಯಗಳನ್ನು ಒಡೆದು ಆಳುವ ಕೆಟ್ಟ ಸಂಪ್ರದಾಯಕ್ಕೆ ಸರ್ಕಾರ ನಾಂದಿ ಹಾಡಿದೆ. ಸದಾಶಿವ ಆಯೋಗದ ಸಾಧಕ ಬಾಧಕ ಚರ್ಚೆಯೇ ಆಗಿಲ್ಲ. ಯಾವ ಉದ್ದೇಶಕ್ಕೆ ಒಳಮೀಸಲಾತಿ ನೀಡುವ ನಿರ್ಧಾರ ಕೈಗೊಂಡರು? ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.
ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶವಿಲ್ಲ. ಸಚಿವ ಪ್ರಭು ಚೌವ್ಹಾಣ್ ತಪ್ಪು ಮಾಹಿತಿ ನೀಡಿದ್ದಾರೆ. ಎಲ್ಲರ ಜೊತೆ ಚರ್ಚೆ ಮಾಡಿ ಜಾರಿ ಮಾಡಿದ್ದೇವೆ ಅಂದಿದ್ದಾರೆ. ಆದ್ರೆ ಯಾವ ನಾಯಕರ ಜೊತೆ ಚರ್ಚೆ ಆಗಿಲ್ಲ. ಬಿಜೆಪಿ ನಾಯಕರು ದಾರಿ ತಪ್ಪಿಸಲು ಹೊರಟಿದ್ದಾರೆ. ಸದನದಲ್ಲಿ ಚರ್ಚೆ ಆಗದೆ ಸದಾಶಿವ ಆಯೋಗ ವರದಿ ಜಾರಿ ಮಾಡಿದ್ದಾರೆ ಎಂದು ಆಪಾದನೆ ಮಾಡಿದರು.
ದಲಿತರ ನಡುವೆ ಬೆಂಕಿ ಹಚ್ಚಿ ಕೂತಿದ್ದಾರೆ. ಇದು ಖಂಡನೀಯ. ಪ್ರಭು ಚೌವ್ಹಾಣ್ ಸತ್ಯಕ್ಕೆ ದೂರವಾದ ಹುಸಿ ಸುಳ್ಳು ಹೇಳ್ತಿದ್ದಾರೆ. ಯಾವ ಸಿಎಂ ಸಭೆ ಕರೆದಿದ್ದರು?. ಯಾರ ಅಭಿಪ್ರಾಯ ತೆಗೆದುಕೊಂಡಿದ್ದೀರಿ. ಬಿಜೆಪಿಯವರು, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕುಡಚಿ ಶಾಸಕ ರಾಜೀವ್ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ವರದಿ ಸದನದ ಮುಂದೆ ಮಂಡಿಸಿಲ್ಲ. ಎಸ್.ಸಿ ಸಮುದಾಯದ ಎಲ್ಲ ಶಾಸಕರನ್ನು ಸಭೆ ಕರೆದಿಲ್ಲ. ನಮ್ಮ ಸಮುದಾಯದ ಜನರನ್ನು ಬೀದಿಗೆ ಬಿಟ್ಟಿರುವುದು ಸರಿಯಾ?. ನಮ್ಮ ಮಧ್ಯೆಯೇ ಬೆಂಕಿ ಹಚ್ಚುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಇದನ್ನೂಓದಿ:ಬಿಎಸ್ವೈ ಮನೆ ಮೇಲೆ ದಾಳಿ ಹಿಂದೆ ಬಿಜೆಪಿ ಕುತಂತ್ರ: ಡಿ.ಕೆ. ಶಿವಕುಮಾರ್