ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಂಘಟನಾತ್ಮಕ ಚಟುವಟಿಕೆ ಆರಂಭಗೊಂಡಿದ್ದು, ಹೈಕಮಾಂಡ್ ಪ್ರತಿನಿಧಿಯಾಗಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಶಿವಪ್ರಕಾಶ್ ಸರ್ಕಾರ ಮತ್ತು ಪಕ್ಷದ ನಾಯಕರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಲಂಚ್ ಮೀಟ್ ಮಾಡಿ ಮಾತುಕತೆ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸಂಘಟನೆ ಚುರುಕುಗೊಳಿಸುವ ನಿಟ್ಟಿನಲ್ಲಿ ಹೈಕಮಾಂಡ್ ಸಂದೇಶ ಹೊತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಶಿವಪ್ರಕಾಶ್ ರಾಜ್ಯಕ್ಕೆ ಆಗಮಿಸಿದ್ದು, ಸಿಎಂ ಜೊತೆಗೆ ಭೋಜನ ಕೂಟದಲ್ಲಿ ಶಿವಪ್ರಕಾಶ್ ಭಾಗಿಯಾದರು. ಕಳೆದ ರಾತ್ರಿ ಆರ್.ಟಿ. ನಗರ ನಿವಾಸದಲ್ಲಿ ಸಿಎಂ ಭೇಟಿ ಮಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ, ಸಿಎಂ ಮನೆಯಲ್ಲೇ ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಿದರು. ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯತೆ ಕುರಿತು ಮಾತುಕತೆ ನಡೆಸಿದರು.
ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಬಿಜೆಪಿ ಸಂಘಟನೆಗೆ ಸಂಬಂಧಿಸಿದಂತೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಶಿವಪ್ರಕಾಶ್ ನೇತೃತ್ವದಲ್ಲಿ ಬೆಂಗಳೂರಿನ ಬಿಜೆಪಿ ಶಾಸಕರ ಸಭೆ ನಡೆಯಿತು. ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ನಂತರ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳ ಜೊತೆ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ.
ಬೆಂಗಳೂರಿಗೆ ಬಂದಿರುವ ಶಿವಪ್ರಕಾಶ್ ಔಪಚಾರಿಕವಾಗಿ ರಾಜಭವನಕ್ಕೆ ಭೇಟಿ ನೀಡಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದರು. ರಾಜಕೀಯ ಉದ್ದೇಶದ ಅಧಿಕೃತ ಭೇಟಿಯಲ್ಲ ಎನ್ನಲಾಗುತ್ತಿದ್ದರೂ ಹೈಕಮಾಂಡ್ ಪ್ರತಿನಿಧಿಯಾಗಿ ರಾಜ್ಯಕ್ಕೆ ಆಗಮಿಸಿ ಸಿಎಂ, ಕಟೀಲ್ ಜೊತೆ ಪ್ರತ್ಯೇಕ ಸಭೆ ನಡೆಸಿ ರಾಜ್ಯಪಾಲರ ಭೇಟಿ ಮಾಡಿರುವುದು ಕೇಸರಿ ಪಾಳೆಯದಲ್ಲಿ ಕುತೂಹಲ ಮೂಡುವಂತೆ ಮಾಡಿದೆ.
ಇದನ್ನೂ ಓದಿ: ಜೆಸಿಬಿಯಿಂದ ಕಾಡಾನೆಗಳನ್ನು ಹಿಂಸಿಸಿ ವಿಕೃತಿ ಮೆರೆದ ಕಿಡಿಗೇಡಿಗಳು: ವಿಡಿಯೋ ವೈರಲ್