ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ನೂತನ ಬಿಜೆಪಿ ಸಂಸದರಿಗೆ ಬುಧವಾರ ರಾಜ್ಯ ಬಿಜೆಪಿ ಅಭಿನಂದನೆ ಸಲ್ಲಿಸುವ ಜೊತೆ ಸರಣಿ ಸಭೆಗಳನ್ನು ಆಯೋಜಿಸಿದೆ.
ಬುಧವಾರ ಇಡೀ ದಿನ ಬಿಜೆಪಿ ಪಡಸಾಲೆಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯಲಿವೆ. ಬೆಳಗ್ಗೆ 11 ಗಂಟೆಗೆ ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಸಂಸದರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ಸೇರಿದಂತೆ ಪಕ್ಷದ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿರಲಿದ್ದು, ರಾಜ್ಯದಿಂದ ಗೆದ್ದಿರುವ ಪಕ್ಷದ 25 ಸಂಸದರನ್ನು ಅಭಿನಂದಿಸಲಾಗುತ್ತದೆ.
ಅಭಿನಂದನಾ ಸಭೆ ಬಳಿಕ ಜಿಲ್ಲಾಧ್ಯಕ್ಷರ ಸಭೆ ನಡೆಯಲಿದೆ. ಎಲ್ಲಾ ಜಿಲ್ಲೆಗಳ ಅಧ್ಯಕ್ಷರಿಂದ ಸ್ಥಳೀಯ ಸಮಸ್ಯೆಗಳು, ಬರ ಪರಿಸ್ಥಿತಿ, ಸಂಘಟನೆ ಇತ್ಯಾದಿಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿರುವ ಸಂಬಂಧ ಚರ್ಚೆ ನಡೆಸಲಾಗುತ್ತದೆ.
ಸಂಜೆ ನಾಲ್ಕು ಗಂಟೆಗೆ ಶಾಸಕರ ಸಭೆ ನಡೆಯಲಿದೆ, ಬರ ಪರಿಸ್ಥಿತಿ ಅಧ್ಯಯನ ಪ್ರವಾಸ, ಮೈತ್ರಿ ಸರ್ಕಾರದ ಗೊಂದಲದ ವಿರುದ್ಧ ಹೋರಾಟ, ಆಪರೇಷನ್ ಹಸ್ತ ವದಂತಿ ಸಂಬಂಧ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಶಾಸಕರ ಸಭೆ ಬಳಿಕ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾದರೆ ಸರ್ಕಾರ ರಚನೆ ಸಂಬಂಧ ಪಕ್ಷದ ಹೈಕಮಾಂಡ್ ಸೂಚನೆ, ಕಾರ್ಯಯೋಜನೆ ಇತ್ಯಾದಿಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.