ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ನೀಡಿದ ಹೇಳಿಕೆಗಳನ್ನು ಬಿಜೆಪಿ ಖಂಡಿಸಿದೆ.
ಕೈ ನಾಯಕರ ಆರೋಪದ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಆಕ್ರಮ ಹಣ ಸಂಪಾದನೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲ (ಇಡಿ)ಯು ದೀರ್ಘ ವಿಚಾರಣೆಗೊಳಪಡಿಸಿ ಇಂದು ಸಂಜೆ ಬಂಧಿಸಿದೆ. ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ, ಬಂಧಿಸಿರುವುದು ಜಾರಿ ನಿರ್ದೇಶನಾಲಯವೇ ಹೊರತು ಬಿಜೆಪಿ ಅಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
![bjp](https://etvbharatimages.akamaized.net/etvbharat/prod-images/kn-bng-09-bjp-press-statement-script-9021933_03092019231401_0309f_1567532641_616.jpg)
ಆಕ್ರಮ ಹಣ ಸಂಪಾದನೆಯ ಹಿನ್ನೆಲೆಯಲ್ಲಿ ಹಾಗೂ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಲಭಿಸಿದ್ದ 8.59 ಕೋಟಿ ರೂ ಹಣದ ಕುರಿತು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಡಿ.ಕೆ.ಶಿವಕುಮಾರ್ ಅವರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದೆ. ದೇಶದ ಕಾನೂನು ಮತ್ತು ಜಾರಿ ನಿರ್ದೇಶನಾಲಯದ ಮುಂದೆ ಯಾವುದೇ ಪಕ್ಷ ಬೇದವಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳವುದು ಅದರ ಧರ್ಮ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಮಾಡುವುದಿಲ್ಲ. ಆದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಭಾವಚಿತ್ರವನ್ನು ಸುಡುತ್ತಿರುವುದು ಮತ್ತು ಅವಮಾನಿಸುತ್ತಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದಿದ್ದಾರೆ.
ಕಾನೂನು ಎಲ್ಲರಿಗಿಂತ ದೊಡ್ಡದು, ದೇಶದ ಕಾನೂನು ಅವರನ್ನು ಬಂಧಿಸಿದೆ. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ನಾಡಿನ ಜನರನ್ನು, ಸಾರ್ವಜನಿಕರನ್ನು ತಪ್ಪು ದಾರಿಗೆ ಒಯ್ಯಬಾರದು. ಬಿಜೆಪಿ ಹಾಗೂ ಪಕ್ಷದ ನಾಯಕರನ್ನು ದೂರವುದು ಅರ್ಥವಿಲ್ಲದ್ದು. ಕಾಂಗ್ರೆಸ್ ಪಕ್ಷ ಕಳೆದ 70ವರ್ಷಗಳಿಂದ ಮಾಡುತ್ತ ಬಂದಿರುವುದನ್ನು ಇಂದು ಸಹ ಹೇಳಿಕೆ ನೀಡುತ್ತಿದ್ದಾರೆ. ಮತ್ತು ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸಬಾರದೆಂದು ಬಿಜೆಪಿಯು ವಿನಂತಿಸುತ್ತದೆ. ಹಾಗೂ ಕಾಂಗ್ರೆಸ್ಸಿನ ನಾಯಕರು, ಕಾರ್ಯಕರ್ತರು ಕೋರ್ಟಿನಲ್ಲಿ ಕಾನೂನಿನ ಹೋರಾಟ ನಡೆಸಿ ಗೆದ್ದು ಬರುವುದಕ್ಕೆ ಬಿಜೆಪಿಯ ಯಾವುದೇ ಆಕ್ಷೇಪವಿಲ್ಲವೆಂದು ಬಿಜೆಪಿ ಸ್ಪಷ್ಟವಾಗಿ ಹೇಳಿದೆ ಎಂದು ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.