ಬೆಂಗಳೂರು: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೆ ಬಿಜೆಪಿ ಬಿ ಫಾರಂ ವಿತರಣೆ ಆರಂಭಿಸಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ನಾಯಕ ಸುರೇಶ್ ಕುಮಾರ್, ಹಾಲಿ ಶಾಸಕ ಉದಯ್ ಗರುಡಾಚಾರ್, ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ 22 ಅಭ್ಯರ್ಥಿಗಳಿಗೆ ಬುಧವಾರ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿ ಫಾರಂ ವಿತರಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದರು. ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿರುವ 189 ಅಭ್ಯರ್ಥಿಗಳಲ್ಲಿ ಶಿರಸಿ ಹಾಲಿ ಶಾಸಕರೂ ಆಗಿರುವ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಕಚೇರಿಗೆ ಆಗಮಿಸಿದರು. ಸ್ಪೀಕರ್ ಆದ ನಂತರ ಇದು ಅವರ ಮೊದಲ ಭೇಟಿಯಾಗಿದೆ. ಪಕ್ಷದ ಶಿಷ್ಟಾಚಾರದಂತೆ ಕಚೇರಿಯಲ್ಲಿ ಭಾರತಮಾತೆಗೆ ನಮಿಸಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಶಿರಸಿ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿ ಫಾರಂ ಪಡೆದುಕೊಂಡರು.
22 ಅಭ್ಯರ್ಥಿಗಳಿಗೆ ಬಿ ಫಾರಂ: ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಚಿಕ್ಕಪೇಟೆ ಅಭ್ಯರ್ಥಿ ಉದಯ್ ಗರುಡಾಚಾರ್, ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ ರಾವ್, ಕೋಲಾರ ಅಭ್ಯರ್ಥಿ ವರ್ತೂರು ಪ್ರಕಾಶ್, ವಿಜಯನಗರ ಕ್ಷೇತ್ರದ ಅಭ್ಯರ್ಥಿ ಹೆಚ್.ರವೀಂದ್ರ, ಪುಲಿಕೇಶಿ ನಗರ ಅಭ್ಯರ್ಥಿ ಮುರಳಿ, ಬ್ಯಾಟರಾಯನಪುರ ಅಭ್ಯರ್ಥಿ ತಮ್ಮೇಶಗೌಡ ಸೇರಿದಂತೆ 22 ಅಭ್ಯರ್ಥಿಗಳು ಬಿ ಫಾರಂ ಪಡೆದುಕೊಂಡಿದ್ದಾರೆ.
ಬಿ ಫಾರ್ಮ್ ಪಡೆದ ನಂತರ ಮಾತನಾಡಿದ ವಿಜಯನಗರ ಕ್ಷೇತ್ರಷ ಅಭ್ಯರ್ಥಿ ಹೆಚ್ ರವೀಂದ್ರ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ, ನಮ್ಮ ನಾಯಕರಿಗೆ ಅಭಿನಂದನೆ. ಕಳೆದ ಬಾರಿ ವಿಜಯನಗರ ಕ್ಷೇತ್ರದಿಂದ ಒಂದುವರೆ ಸಾವಿರ ಮತಗಳಿಂದ ಸೋತಿದ್ದೆ. ಈ ಬಾರಿ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಕೃಷ್ಣಪ್ಪ ಮೂರು ಬಾರಿ ಗೆದ್ದು ಶಾಸಕರಾಗಿದ್ರು. ಅವರಿಗೆ ರಾಜಕೀಯ ವಿರೋಧಿ ಅಲೆ ಶುರುವಾಗಿದೆ. ಹಾಗಾಗಿ ಈ ಬಾರಿ ನಾನು ಗೆಲ್ಲುವ ವಿಶ್ವಾಸ ಇದೆ. ಸೋಮಣ್ಣ ಅವರು ಕಳೆದ ಬಾರಿ ಜೊತೆಯಲ್ಲಿ ಇದ್ರು. ಈ ಬಾರಿ ಇಲ್ಲದೆ ಹೋದ್ರು ವರುಣ, ಚಾಮರಾಜನಗರ ನಿಲ್ತಿದ್ದಾರೆ. ಅವರಿಲ್ಲದಿದ್ರೂ ಅವರ ಪ್ರಭಾವ ಇದೆ. ಅವರ ಆಶೀರ್ವಾದದಿಂದ ಗೆಲ್ಲುತ್ತೇವೆ ಎಂದು ಹೇಳಿದರು.
ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಅವಕಾಶ ನೀಡಿದೆ: ಪುಲಿಕೇಶಿ ನಗರ ಅಭ್ಯರ್ಥಿ ಮುರಳಿ ಮಾತನಾಡಿ, ಪಕ್ಷ ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಪುಲಿಕೇಶಿ ನಗರ ಕ್ಷೇತ್ರಕ್ಕೆ ಆಯ್ಕೆ ಮಾಡಿದೆ, ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಅವಕಾಶ ಮಾಡಿದೆ, ನಾನು ಪಕ್ಷದ ಹಿರಿಯರಿಗೆ ಧನ್ಯವಾದಗಳು ತಿಳಿಸುತ್ತೇನೆ, ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಅವರು ನನಗೆ ಬಿ ಫಾರಂ ನೀಡಿದ್ದಾರೆ, ನಮ್ಮ ಕ್ಷೇತ್ರದ ಎಲ್ಲಾ ಹಂತದ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಪಕ್ಷ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಾವು ಉಳಿಸಿಕೊಳ್ಳುತ್ತೇವೆ, ನಾನು ಗೆಲ್ಲುವ ಮೂಲಕ ಬಿಜೆಪಿ ಶಕ್ತಿ ಆ ಕ್ಷೇತ್ರದಲ್ಲಿ ಹೆಚ್ಚು ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ತಮ್ಮೇಶ್ ಗೌಡ, ರಾಜ್ಯದ ನಾಯಕರು, ರಾಷ್ಟ್ರೀಯ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ್ದಾರೆ. ಮೂರು ಬಾರಿ ಗೆಲ್ಲದ ಬ್ಯಾಟರಾಯನಪುರದಲ್ಲಿ ಬಿಜೆಪಿ ಅರಳಿಸಲು ನಿರ್ಧಾರ ಮಾಡಿದ್ದಾರೆ. ಬ್ಯಾಟರಾಯನಪುರದ ಬಗ್ಗೆ ವಿಶ್ವಾಸ ಇಟ್ಟಿದ್ದರು. ಜನರು ಕೂಡ ಹೊಸ ಮುಖ ಬಯಸಿತ್ತು. ಯಾವ ಜನ, ಯಾವ ನಾಯಕರು ವಿಶ್ವಾಸ ಇಟ್ಟಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.
ಎ ರವಿ ಮತ್ತು ಮುನೀಂದ್ರ ಕುಮಾರ್ ಬಂಡಾಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ತಮ್ಮೇಶಗೌಡ, ಇಬ್ಬರೂ ಕೂಡ ಶಾಸಕರಾಗಲು ಅರ್ಹರೇ. ರವಿ ಅವರು ಕಳೆದ ಮೂರು ಬಾರಿ ಸ್ಪರ್ಧೆ ಮಾಡಿದ್ದರು. ಮುನೀಂದ್ರ ಕುಮಾರ್ ಕೂಡ ಬಿಜೆಪಿ ಗೆಲ್ಲಿಸೋ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಪಕ್ಷ ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಹಾಗಾಗಿ ನನಗೆ ಕೊಟ್ಟಿದ್ದಾರೆ. ನನಗೆ ವಿಶ್ವಾಸ ಇದೆ ಅವರು ನನ್ನ ಜೊತೆ ಬರ್ತಾರೆ ಅಂತ. ನಾವೆಲ್ಲಾ ಒಂದೇ ಕುಟುಂಬದವರು, ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಬ್ಯಾಟರಾಯನಪುರದಲ್ಲಿ ಕಮಲ ಅರಳಿಸುತ್ತೇವೆ ಎಂದರು.
ಇದನ್ನೂ ಓದಿ: ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಏಳು ಶಾಸಕರ ಕೈ ತಪ್ಪಿದ ಟಿಕೆಟ್