ಬೆಂಗಳೂರು: ಕಳೆದ ಆರು ವರ್ಷಗಳ ಕಾಲ ಸಂಘದ ನಿಯೋಜನೆ ಮೇರೆಗೆ ಪಕ್ಷದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಅವರನ್ನು ಸಂಘದ ಕರ್ತವ್ಯಕ್ಕೆ ಮರಳಿ ಕರೆಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯ ಬಿಜೆಪಿ ವತಿಯಿಂದ ಇಂದು ಬೀಳ್ಕೊಡುಗೆ ನೀಡಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ನಿಯುಕ್ತಿಗೊಂಡಿರುವ ಅರುಣ್ ಕುಮಾರ್ ಅವರಿಗೆ ರಾಜ್ಯ ಬಿಜೆಪಿ ಬೀಳ್ಕೊಟ್ಟಿತು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸರಳ ಸಮಾರಂಭದ ಮೂಲಕ ಬೀಳ್ಕೊಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೂತನ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರ್ ಸೇರಿದಂತೆ ರಾಜ್ಯ ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಳೆದ ಆರು ವರ್ಷಗಳ ಕಾಲ ಸಂಘಟನೆಗೆ ನೀಡಿದ ಕೊಡುಗೆಯನ್ನು ರಾಜ್ಯದ ನಾಯಕರು ಶ್ಲಾಘಿಸಿದರು. ಸಂಘ ಮತ್ತು ಪಕ್ಷದ ನಡುವೆ ಕೊಂಡಿಯಂತೆ ಕೆಲಸ ಮಾಡಿ ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಗೊಳ್ಳಲು ನೀಡಿದ ಸಹಕಾರವನ್ನು ನಾಯಕರು ಸ್ಮರಿಸಿದರು. ಸಂಘಕ್ಕೆ ಮರಳಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗುತ್ತಿರುವ ಅರುಣ್ ಕುಮಾರ್ ಮುಂದೆಯೂ ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿಯಾಗಲಿ ಎಂದು ರಾಜ್ಯ ನಾಯಕರು ಶುಭ ಕೋರಿದರು.