ಬೆಂಗಳೂರು: ಬಿಜೆಪಿಯ ಮಾಜಿ ಶಾಸಕರಾದ ರಾಜು ಕಾಗೆ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕಾಗವಾಡ ಕ್ಷೇತ್ರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀಮಂತ್ ಪಾಟೀಲ್ ವಿರುದ್ಧ ಸೋಲು ಕಂಡಿದ್ದ ರಾಜು ಕಾಗೆ ಅವರು ಇದೀಗ ಪಾಟೀಲರ ಅನರ್ಹತೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿಯೂ ಪಕ್ಷದಿಂದ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿದ ಕಾರಣ ಅನರ್ಹರನ್ನು ಬಿಜೆಪಿಯಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದು, ಇದರಿಂದ ಬೇಸರಗೊಂಡಿರುವ ರಾಜು ಕಾಗೆ ಕಾಂಗ್ರೆಸ್ ಪಾಳಯದಲ್ಲಿ ಎರಡು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅವರು ವಿವಿಧ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ನಿನ್ನೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ರಾಜು ಕಾಗೆ, ಇಂದು ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಕಾಗವಾಡದಿಂದ ತಮ್ಮನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ.