ಬೆಂಗಳೂರು: ಯಲಹಂಕದಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ ಮಾಡಿದ ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಒತ್ತಾಯಿಸಿದರು. ಯಲಹಂಕದಲ್ಲಿ ಸಚಿವರಿಂದ ದೌರ್ಜನ್ಯಕ್ಕೊಳಗಾದ ದಲಿತ ಮಹಿಳೆ ಮುನಿಯಮ್ಮರನ್ನು ಬಿಜೆಪಿ ನಿಯೋಗವು ಇಂದು ಭೇಟಿ ಮಾಡಿತು. ಕುಟುಂಬದ ಅಹವಾಲು ಆಲಿಸಿತು. ನಂತರ ಮಾತನಾಡಿದ ಮಾಜಿ ಡಿಸಿಎಂ ಕಾರಜೋಳ, ದಲಿತರ ಆಸ್ತಿ ಕಬಳಿಕೆಗೆ ಸಚಿವರೇ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಸ್ವಾತಂತ್ರ್ಯೋತ್ತರದ 75 ವರ್ಷಗಳ ಆಡಳಿತದಲ್ಲಿ ಇದೊಂದು ಕಪ್ಪುಚುಕ್ಕೆ ಎಂದು ಆರೋಪಿಸಿದರು.
ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ದಲಿತರ ಆಸ್ತಿ ಕಬಳಿಸಿ ದೌರ್ಜನ್ಯ ಮಾಡಿದ್ದು ಖಂಡನೀಯ. ರಸ್ತೆಗಳನ್ನು ಬಂದ್ ಮಾಡಿದ್ದು ಆಕ್ಷೇಪಾರ್ಹ. ಈ ಸರಕಾರ ದಲಿತರನ್ನು ರಕ್ಷಿಸಲು ಬಂದಿದೆಯೇ ಅಥವಾ ದೌರ್ಜನ್ಯ ಮಾಡಲು ಬಂದಿದೆಯೇ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಒಳಗೆ ಸೇರಿಕೊಂಡ ಗೂಂಡಾಗಳನ್ನು ಬಂಧಿಸಿ ಸಂತ್ರಸ್ತರಿಗೆ ರಕ್ಷಣೆ ಕೊಡಿಸಲು ಅವರು ಒತ್ತಾಯಿಸಿದರು.
ಬಳಿಕ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮಾಧ್ಯಮದವರು ಇಲ್ಲಿನ ವಿದ್ಯಮಾನಗಳನ್ನು ಗಮನಿಸಿದ್ದೀರಿ. ಬಡವರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಲು ಮತ್ತು ತೊಂದರೆ ಮಾಡಿದ್ದರೆ ಶಿಕ್ಷೆ ವಿಧಿಸಲು ಆಗ್ರಹಿಸಲು ನಾವು ಬಂದಿದ್ದೇವೆ. 2019ರಲ್ಲಿ ಇಲ್ಲಿಗೆ ಸುಧಾಕರ್ ಅವರು ಬಂದಿದ್ದರು. ಇದನ್ನು ಅಭಿವೃದ್ಧಿ ಮಾಡಲು ಒಪ್ಪಿಗೆ ಪತ್ರ ಕೇಳಿದ್ದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋದಾಗ 5.70 ಕೋಟಿಗೆ ಜಾಗ ಖರೀದಿ ಒಪ್ಪಂದ ಮಾಡಿಕೊಂಡಿದ್ದರು ಎಂದರು.
4.30 ಕೋಟಿ ನಗದು ಕೊಟ್ಟಿದ್ದಾಗಿ ಬರೆಸಿಕೊಂಡರು. ಇವರು ಕೊಟ್ಟ 1.40 ಕೋಟಿಯ ಚೆಕ್‍ಗಳು ಬೌನ್ಸ್ ಆಗಿದ್ದವು. ಅಗ್ರಿಮೆಂಟ್ ರದ್ದತಿಗೆ ಹೋದ ಬಳಿಕ ವಿಕ್ರಯ ಚೀಟಿ ಕುರಿತು ತಿಳಿಯಿತು. ಡಿ.ಸುಧಾಕರ್ ಈ ಜಾಗದ ಮೇಲೆ 25 ಕೋಟಿ ಸಾಲವನ್ನು ಅವರದೇ ಸೊಸೈಟಿಯಿಂದ ಪಡೆದಿದ್ದಾರೆ. ಇಷ್ಟೆಲ್ಲ ಆದ ಮೇಲೆ ಅಧಿಕಾರಕ್ಕೆ ಬಂದಿದ್ದು, ಕೇಸುಗಳು ಬಾಕಿ ಇರುವಾಗಲೇ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇವರನ್ನು ಎತ್ತಂಗಡಿ ಮಾಡಲು ಸಚಿವರು ಮುಂದಾಗಿದ್ದಾರೆ ಎಂದು ದೂರಿದರು.
ಇದೊಂದು ವಂಚನೆ ಪ್ರಕರಣ. ನ್ಯಾಯ ಕೋರಿ ಇಲ್ಲಿ ಬಂದಿದ್ದೇವೆ. ಇದರಲ್ಲಿ ಸಚಿವರಿದ್ದಾರೆ ಎಂದರೆ ಇದರ ಹಿಂದೆ ಸರಕಾರ ಇರುವುದು ಸ್ಪಷ್ಟ. ಆದ್ದರಿಂದ ತಕ್ಷಣವೇ ಈ ಸಚಿವರನ್ನು ಸಂಪುಟದಿಂದ ಹೊರ ಹಾಕಬೇಕು. ಇಲ್ಲವಾದರೆ ಅವರೇ ರಾಜೀನಾಮೆ ಕೊಡಬೇಕು ಎಂದರಲ್ಲದೇ, ಸರಕಾರ ಈ ಕುರಿತು ಕೂಲಂಕಷ ಪರಿಶೀಲನೆ ನಡೆಸಬೇಕು. ಶೆಡ್‍ಗಳನ್ನು ಒಡೆಯಲಾಗಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ನಂತರ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಜನರು ನಿಮಗೆ ಮತ ಕೊಟ್ಟು ಅಧಿಕಾರ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ದೀನದಲಿತರು, ಬಡವರ ಪರ ನೀವು ಎಂದು ಕಾಂಗ್ರೆಸ್ ಚುನಾವಣೆ ಹೇಳಿದ್ದು ಸುಳ್ಳೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಆರೋಪಿ ಸಚಿವರನ್ನು ಸಂಪುಟದಿಂದ ವಜಾ ಮಾಡಿ. ಈ ಕುಟುಂಬಕ್ಕೆ ನ್ಯಾಯ ಕೊಡಿ. ಇಲ್ಲವಾದರೆ ಇನ್ನಷ್ಟು ತೀವ್ರವಾದ ಹೋರಾಟ ಮಾಡಿ ಜನರ ಕಣ್ಣನ್ನು ತೆರೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಸಚಿವರನ್ನು ಅವರ ಸ್ಥಾನದಿಂದ ವಜಾ ಮಾಡಿ. ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದರು. ಈ ಜಾಗವನ್ನು ನೋಡಿದರೆ ಸುಧಾಕರರ ಗೂಂಡಾಗಿರಿ ಗೊತ್ತಾಗುತ್ತದೆ. ಇಲ್ಲಿ ದಲಿತ ಮಹಿಳೆ ಮತ್ತಿತರರು ನಿರಾಶ್ರಿತರಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಸಚಿವರಾಗಿ ಕಾನೂನಿಗೆ ವಿರುದ್ಧವಾಗಿ ಜಾಗವನ್ನು ಕಬ್ಜ ಮಾಡಿದ್ದಾರೆ. ಇದು ಸರಿಯೇ? ಎಸ್‍ಸಿ, ಎಸ್‍ಟಿ ಮಹಿಳೆಯರು, ಪುರುಷರು ನಿರಾಶ್ರಿತರಾಗಿದ್ದಾರೆ. ಅವರು ಎಲ್ಲಿ ಬದುಕಬೇಕು? ಎಂದು ಪ್ರಶ್ನಿಸಿದರು. 25 ಕೋಟಿ ಸಾಲ ಹೇಗೆ ಸಿಕ್ಕಿದೆ? ಬ್ಯಾಂಕ್ ಇವರದೇ ಆದರೂ ಇವರು ಆಡಿದ್ದೇ ಆಟವೇ? ಕಾನೂನೇ ಪಾಲಿಸಿಲ್ಲವೇ? ಇದರ ಬಗ್ಗೆ ತನಿಖೆ ಆಗಬೇಕು. ಒತ್ತಾಯಪೂರ್ವಕ ಸಹಿ ಹಾಕಿಸಿಕೊಂಡಿದ್ದು, ಹೆಬ್ಬೆಟ್ಟು ಗುರುತು ಹಾಕಿಸಿದ್ದು, ಕಾನೂನಿಗೆ ವಿರುದ್ಧವಾಗಿದೆ. ಇದರ ಬಗ್ಗೆಯೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನೂರಾರು ಕೋಟಿ ಬೆಲೆಯ ಜಾಗವನ್ನು ಕನಿಷ್ಠ ಬೆಲೆಯಲ್ಲಿ ಕೊಂಡುಕೊಳ್ಳುವುದು ಯಾವ ನ್ಯಾಯ? ಮಾತೆತ್ತಿದರೆ ಸಾಮಾಜಿಕ ನ್ಯಾಯದ ಮಾತನಾಡುವ ಸಿದ್ದರಾಮಯ್ಯ ಅವರೇ ಎಲ್ಲಿದೆ ಸಾಮಾಜಿಕ ನ್ಯಾಯ? ಎಲ್ಲಿದೆ ದಲಿತರಿಗೆ ನ್ಯಾಯ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಡಾ.ಅಂಬೇಡ್ಕರ್ ಫೋಟೋ ಇಟ್ಟು ಧರಣಿ ಕುಳಿತ ಇವರಿಗೆ ನ್ಯಾಯ ಕೊಡುವವರು ಯಾರು? ಗೃಹ ಸಚಿವರು ಇಲ್ಲಿಗೆ ಭೇಟಿ ಕೊಟ್ಟು ದಲಿತ ಕುಟುಂಬಗಳಿಗೆ ನ್ಯಾಯ ಕೊಡಬೇಕು ಎಂದು ತಮ್ಮ ಒತ್ತಾಯಿಸಿದರು.
ಇದನ್ನೂ ಓದಿ: ಸಚಿವ ಡಿ ಸುಧಾಕರ್ ರಾಜೀನಾಮೆ ಒತ್ತಾಯ : ಕಾನೂನು ಕ್ರಮಕ್ಕೆ ಬಿ ವೈ ವಿಜಯೇಂದ್ರ ಆಗ್ರಹ