ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯ ಮಹತ್ವದ ಸಭೆ ಆರಂಭಗೊಂಡಿದೆ. ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಮಹತ್ವದ ಚರ್ಚೆ ನಡೆಯುತ್ತಿದ್ದು, ಚುನಾವಣಾ ಅಜೆಂಡಾ ಸೆಟ್ ಮಾಡುವ ಕುರಿತು ಸಮಾಲೋಚನೆ ನಡೆಯುತ್ತಿದೆ.
ರಾಜ್ಯ ಬಿಜೆಪಿ ಸರ್ಕಾರ ರಚನೆಯಾದ ನಂತರ ಅಮಿತ್ ಶಾ ಮೊದಲ ಬಾರಿ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದರು. ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಜಗನ್ನಾಥರಾವ್ ಜೋಷಿ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದರು. ನಂತರ ಕೋರ್ ಕಮಿಟಿ ಸಭೆಯ ನೇತೃತ್ವ ವಹಿಸಿ ಸಭೆ ಆರಂಭಿಸಿದರು.
ಮುಖ್ಯವಾಗಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇರುವಂತೆ ನೋಡಿಕೊಳ್ಳುವ ಕುರಿತು ಚರ್ಚಿಸಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು, ಜನರಲ್ಲಿ ಜಾಗೃತಿ ಮೂಡಿಸಿ ಬಿಜೆಪಿ ಪರ ಒಲವು ಮೂಡುವಂತೆ ನೋಡಿಕೊಳ್ಳುವ ಟಾಸ್ಕ್ ಅನ್ನು ಬಿಜೆಪಿ ನಾಯಕರಿಗೆ ನೀಡಲಾಗುತ್ತದೆ ಎನ್ನಲಾಗಿದೆ.
ಯಾವ ಕಾರಣಕ್ಕೂ ಮುಂದಿನ ಯಾವ ಚುನಾವಣೆಗಳಲ್ಲಿಯೂ ಬಿಜೆಪಿ ಹಿನ್ನಡೆ ಆಗಬಾರದು ಎನ್ನುವ ಕಾರಣಕ್ಕೆ ಸಂಘಟನಾತ್ಮಕ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗುತ್ತದೆ. ಬಿಬಿಎಂಪಿ ಚುನಾವಣೆ ವಿಷಯದಲ್ಲಿಯೂ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಸೇರಿದಂತೆ ಸರ್ಕಾರ ಮತ್ತು ಪಕ್ಷದ ಆಂತರಿಕ ವಿಚಾರಗಳ ಕುರಿತು ಪ್ರಸ್ತಾಪ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮುಂಬರಲಿರುವ ಚುನಾವಣೆಗೆ ಅಜೆಂಡಾ ಸೆಟ್ ಮಾಡುವ ಕುರಿತು ಅಮಿತ್ ಶಾ ಕೆಲವೊಂದು ಸಲಹೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ಯಾವ ರೀತಿ ಪ್ರಚಾರ ಕಾರ್ಯ ನಡೆಸಬೇಕು, ಯಾವೆಲ್ಲಾ ವಿಷಯಗಳನ್ನು ಜನರ ಮುಂದಿಡಬೇಕು. ಸದ್ಯ ಹಿಜಾಬ್ ವಿವಾದ, ದೇವಾಲಯ, ಜಾತ್ರೆಗಳಲ್ಲಿ ಹಿಂದೂಯೇತರರ ವ್ಯಾಪಾರ ನಿರ್ಬಂಧ, ಹಲಾಲ್ ಕಟ್ ನಂತರ ವಿವಾದಗಳಿದ್ದು, ಇದರಲ್ಲಿ ಬಿಜೆಪಿ ಯಾವ ರೀತಿ ಮುಂದುವರೆಯಬೇಕು, ಯಾವೆಲ್ಲ ಅಂಶಗಳನ್ನು ಪ್ರಚಾರ ಕಾರ್ಯಕ್ಕೆ ಹೆಚ್ಚಾಗಿ ಬಳಸಿಕೊಳ್ಳಬೇಕು ಎನ್ನುವ ಕುರಿತು ಸಮಾಲೋಚನೆ ನಡೆಯಲಿದ್ದು, ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದ ನಾಯಕತ್ವದಲ್ಲಿ ಒಗ್ಗಟ್ಟಿನ ಮಂತ್ರ ಬೋಧಿಸಲಿದ್ದಾರೆ. ಒಟ್ಟಾಗಿ ರಾಜ್ಯ ಪ್ರವಾಸ ಮಾಡಬೇಕು, ಆಂತರಿಕ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ಚರ್ಚೆಯಾಗಬಾರದು ಎನ್ನುವ ಸೂಚನೆ ನೀಡಲಿದ್ದಾರೆ. ರಾಜ್ಯ ಕಾರ್ಯಕಾರಿಣಿಗೂ ಮುನ್ನ ನಡೆಯುವ ರಾಜ್ಯ ಪ್ರವಾಸದ ಬಗ್ಗೆಯೂ ಮಾತುಕತೆ ನಡೆಯಲಿದೆ ಎನ್ನಲಾಗಿದೆ.
ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ಚುನಾವಣೆ ಜೊತೆಗೆ ರಾಜ್ಯದಲ್ಲಿಯೂ ಚುನಾವಣೆ ನಡೆಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವಧಿಪೂರ್ವ ಚುನಾವಣೆ ವಿಷಯದ ಕುರಿತು ಅನೌಪಚಾರಿಕ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೋರ್ ಕಮಿಟಿ ಸದಸ್ಯರಾದ ಪ್ರಹ್ಲಾದ್ ಜೋಷಿ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಈ ಹಿಂದಿನಂತೆ ಮುಂದಿನ ಚುನಾವಣೆ ಸುಲಭದ್ದಲ್ಲ: ಈಗಿಂದಲೇ ಸಿದ್ಧರಾಗಿ ಎಂದು ಶಾಸಕರಿಗೆ ರಾಹುಲ್ ಕರೆ