ಬೆಂಗಳೂರು : ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುತ್ತಿದೆ. ಸಭೆ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಿಕೊಡಲಾಗುತ್ತದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿ ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ನಾಲ್ಕೈದು ಜನ ಪ್ರಬಲ ಆಕಾಂಕ್ಷಿಗಳಿದ್ದು, ಟಿಕೆ್ಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಸಿಎಂ ತವರು ಜಿಲ್ಲೆಯ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಿದೆ.
ಸಿಎಂ ಉದಾಸಿ ಅವರ ಸೊಸೆ ರೇವತಿ ಉದಾಸಿ, ಕಲ್ಯಾಣ ಕುಮಾರ್ ಶೆಟ್ಟರ್, ಸಿದ್ದರಾಜ ಕಲಕೋಟೆ, ಶಿವರಾಜ ಸಜ್ಜನ್, ಮಹಾಂತೇಶ ಸೊಪ್ಪಿನ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಅತ್ತ ಸಿಂದಗಿಯಲ್ಲಿ ಮಾಜಿ ಶಾಸಕ ರಮೇಶ್ ಬೂಸನೂರು, ಸಂಗನಗೌಡ ಪಾಟೀಲ್ ಹಾಗೂ ಸಿದ್ದು ಬಿರಾದಾರ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ.
ಎರಡೂ ಕ್ಷೇತ್ರಗಳ ವೀಕ್ಷಕರು ಸ್ಥಳೀಯ ನಾಯಕರಿಂದ ಸಂಗ್ರಹಿಸಿರುವ ಅಭಿಪ್ರಾಯ ಹಾಗೂ ಆಕಾಂಕ್ಷಿಗಳ ಸಾಮರ್ಥ್ಯ, ವರ್ಚಸ್ಸು ಆಧರಿಸಿ ಯಾರಿಗೆ ಟಿಕೆಟ್ ನೀಡಿದರೆ ಒಳಿತು ಎನ್ನುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಸಭೆಯಲ್ಲಿ ಎರಡೂ ಕ್ಷೇತ್ರದಿಂದ ಒಂದಕ್ಕಿಂತ ಹೆಚ್ಚು ಹೆಸರುಗಳನ್ನೇ ಹೈಕಮಾಂಡ್ ಕಳುಹಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.