ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ 10 ಹೆಸರು ಅಂತಿಮಗೊಳಿಸಿದ್ದು, ಸರ್ಕಾರ ರಚನೆಗೆ ಕಾರಣರಾದ ಮೂವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿ ಸದಸ್ಯರಿಂದ ಒಟ್ಟು 163 ಹೆಸರುಗಳ ಪ್ರಸ್ತಾಪ ಮಾಡಿ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ನಾಲ್ಕು ಸ್ಥಾನಗಳಿಗೆ ಒಟ್ಟು 10 ಮಂದಿಯ ಹೆಸರುಗಳನ್ನು ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ಕೋರ್ ಕಮಿಟಿ ನಿರ್ಧಾರ ಮಾಡಿದೆ.
ಎರಡು ವಿಧದಲ್ಲಿ ಅಭ್ಯರ್ಥಿಗಳ ಹೆಸರನ್ನು ಕೋರ್ ಕಮಿಟಿ ಶಿಫಾರಸು ಮಾಡಿದೆ. ಸಂಭಾವ್ಯ ಪಟ್ಟಿಯಲ್ಲಿ ಸರ್ಕಾರ ರಚನೆಗೆ ಕಾರಣರಾದವರು ಮತ್ತು ಕಾರ್ಯಕರ್ತರು ಎಂದು ಎರಡು ವಿಧದಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ.
ಸರ್ಕಾರ ರಚನೆಗೆ ಕಾರಣರಾದವರ ಪೈಕಿ ಪರಾಜಿತ ಅಭ್ಯರ್ಥಿಗಳಾದ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಜೊತೆ ಚುನಾವಣಾ ಕಣದಿಂದ ದೂರ ಉಳಿದಿದ್ದ ಆರ್.ಶಂಕರ್ ಹೆಸರನ್ನು ಸೇರಿಸಲಾಗಿದೆ. ಜೊತೆಗೆ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಹೆಸರೂ ಇದೆ ಎನ್ನಲಾಗಿದೆ.
ಇನ್ನು ಕಾರ್ಯಕರ್ತರ ಪೈಕಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಪಿ.ಹೆಚ್.ಪೂಜಾರ್, ಗೋಪಿನಾಥ್ ರೆಡ್ಡಿ ಸೇರಿ ಆರು ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟು 163 ಹೆಸರುಗಳು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಎಂಟಿಬಿ, ವಿಶ್ವನಾಥ್, ಶಂಕರ್ ಹಾಗೂ ವಲ್ಯಾಪುರೆಗೆ ನಾನು ಪ್ರಾಮಿಸ್ ಮಾಡಿದ್ದೇನೆ. ಹಾಗಾಗಿ ಅವರ ಹೆಸರನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆಯಲ್ಲಿ ಹೇಳಿದ್ದು, ಇದಕ್ಕೆ ಕೋರ್ ಕಮಿಟಿ ಸದಸ್ಯರು ವಿರೋಧ ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ. ಉಳಿದ 6 ಹೆಸರನ್ನು ಉಳಿದ ಸದಸ್ಯರ ಶಿಫಾರಸಿನ ಪ್ರಕಾರ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.