ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡಿಲ್ಲ ಎನ್ನುವುದು ಸತ್ಯಕ್ಕೆ ದೂರವಾಗಿದ್ದು, ಅಧಿಕೃತ ಆಹ್ವಾನ ನೀಡಲಾಗಿತ್ತು ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.
ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯ ಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಬರೆದಿದ್ದ ಅಧಿಕೃತ ಪತ್ರದ ಪ್ರತಿಯನ್ನು ಟ್ವಿಟರ್ನಲ್ಲಿ ಪ್ರಕಟಿಸಿದೆ.
ಅಷ್ಟೇ ಅಲ್ಲ, ಕನ್ನಡದ ಅಸ್ಮಿತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಈ ಮಣ್ಣಿಗೆ ಸೇವೆ ಸಲ್ಲಿಸಿದ ಸಾಧಕರಾದಿಯಾಗಿ ನಮ್ಮ ರಾಜ್ಯದ ಕಟ್ಟ ಕಡೆಯಲ್ಲಿರುವವರನ್ನೂ ಮರೆಯದೇ, ಹಿಂಬಾಲಿಸಿ ಗುರುತಿಸಿದ್ದು ಬಿಜೆಪಿ. ಕುಟುಂಬವನ್ನೇ ಪಕ್ಷವನ್ನಾಗಿಸಿಕೊಂಡ ಜೆಡಿಎಸ್‌ಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಯಾವತ್ತಿಗೂ ಬಿಡಿಸಲಾಗದ ಒಗಟು ಎಂದು ಬಿಜೆಪಿ ಟೀಕಿಸಿದೆ.
ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗ ಹೆಚ್.ಡಿ.ದೇವೇಗೌಡ ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸರಕಾರವು ಆಹ್ವಾನಿಸದಿರುವುದು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿತ್ತು.
ದೇವೆಗೌಡರನ್ನುಆಹ್ವಾನಿಸದಿದ್ದಕ್ಕೆ ಆಕ್ಷೇಪ: ನಾಡಪ್ರಭುಗಳ ಪ್ರತಿಮೆ ಸ್ಥಾಪನೆಯ ಕಾಮಗಾರಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಆಹ್ವಾನಿಸಿದ ಬಿಜೆಪಿ ಸರಕಾರ, ಪ್ರತಿಮೆ ಲೋಕಾರ್ಪಣೆ ಸಮಾರಂಭಕ್ಕೆ ಅದೇ ಪ್ರಧಾನಿಗಳಿಗೆ ಆಹ್ವಾನ ಮಾಡಲಿಲ್ಲ, ಯಾಕೆ? ಎಂದು ಜೆಡಿಎಸ್ ಟ್ವೀಟ್ ಮೂಲಕ ಪ್ರಶ್ನಿಸಿತ್ತು.
(ಓದಿ: ದೇವೆಗೌಡರಿಗೆ ಆಹ್ವಾನಿಸದಿದ್ದಕ್ಕೆ ಜೆಡಿಎಸ್ ಆಕ್ರೋಶ: ನಾಡಪ್ರಭು ಕೆಂಪೇಗೌಡರು ಬಿಜೆಪಿ ಆಸ್ತಿಯಲ್ಲಎಂದು ಗರಂ)