ಬೆಂಗಳೂರು : ಈಗಾಗಲೇ ಕೋವಿಡ್ 3ನೇ ಅಲೆಯ ಆತಂಕ ಎದುರಾಗುತ್ತಿದೆ. ಇತ್ತ ರಾಜ್ಯ ಸರ್ಕಾರ ಜನರಿಗೆ ಮೈ ಮರೆಯಬೇಡಿ ಅಂತಾ ಹೇಳ್ತಿದೆ. ಆದರೆ, ಬಿಜೆಪಿ ಪಕ್ಷ ಕೋವಿಡ್ ಆತಂಕದ ಮಧ್ಯೆ ರಾಜ್ಯಾದ್ಯಂತ ಜನಾಶೀರ್ವಾದ ಯಾತ್ರೆ ನಡೆಸಲು ಮುಂದಾಗಿದೆ.
ಇತ್ತ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಅಂತಾ ಹೇರಲಾಗುತ್ತಿದೆ. ಕೋವಿಡ್ ಹೆಚ್ಚಳ ಆಗುತ್ತಿರುವ ಈ ಸಂದರ್ಭದಲ್ಲಿ ಇನ್ನಷ್ಟು ಕಠಿಣ ಕ್ರಮಕೈಗೊಳ್ಳಲಾಗುತ್ತೆ ಎಂದು ಸಚಿವರುಗಳೇ ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ.
ಒಂದು ಕಡೆ ಸರ್ಕಾರದಿಂದ ಕೋವಿಡ್ ನಿಯಂತ್ರಣಕ್ಕೆ ಶ್ರಮವಹಿಸಲಾಗುತ್ತಿದ್ದರೆ, ಅದೇ ಪಕ್ಷದ ಸಚಿವರಿಂದ ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿಯೇ ಜನಾಶೀರ್ವಾದ ಯಾತ್ರೆ ಕೈಗೊಳ್ಳುತ್ತಿರುವುದು ಕೋವಿಡ್ ನಿಯಂತ್ರಣದಲ್ಲಿನ ಸರ್ಕಾರದ ಗಂಭೀರತೆ ತೋರಿಸುತ್ತಿದೆ. ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲೇ ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ ನಡೆಸಲು ಪಕ್ಷ ಮುಂದಾಗಿದೆ.
ಸೋಮವಾರದಿಂದ ಗಡಿ ಜಿಲ್ಲೆಗಳಲ್ಲಿ ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ ನಡೆಸಲು ನಿರ್ಧರಿಸಿದೆ. ಆಗಸ್ಟ್ 16ರಿಂದ ಆಗಸ್ಟ್ 19ರವರೆಗೆ ನಾಲ್ಕು ದಿನಗಳ ಕಾಲ ಗಡಿ ಜಿಲ್ಲೆಗಳಲ್ಲೂ ಜನಾಶೀರ್ವಾದ ಯಾತ್ರೆ ನಡೆಯಲಿದೆ. ತುಮಕೂರು, ಮೈಸೂರು, ಬೀದರ್, ರಾಯಚೂರು ಸೇರಿ ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ಯಾತ್ರೆ ಹಮ್ಮಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಯಾತ್ರೆ ಮೂಲಕ ಜನ ಸಂದಣಿ ಹೆಚ್ಚಾಗುವ ಆತಂಕವಿದೆ. ಜನರು ಸೇರುವ ಕಾರಣಕ್ಕೆ ಶ್ರಾವಣ ಮಾಸದಲ್ಲಿ ದೇವಸ್ಥಾನ, ಹಬ್ಬ-ಹರಿದಿನಗಳಿಗೂ ನಿರ್ಬಂಧ ವಿಧಿಸಲಾಗಿದೆ. ಆದರೆ, ಇತ್ತ ಆಡಳಿತ ಪಕ್ಷದ ಸಚಿವರಿಂದ ಯಾತ್ರೆಯ ಸಿದ್ಧತೆ ನಡೆಸಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿ ನೂರಾರು ಜನರನ್ನು ಸೇರಿಸಿ ಯಾತ್ರೆ ಕೈಗೊಳ್ಳುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನೂತನ ಕೇಂದ್ರ ಸಚಿವರನ್ನು ಸಂಸತ್‌ನಲ್ಲಿ ಪರಿಚಯಿಸಿಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದರು. ಆಗ ವಿಪಕ್ಷಗಳು ಅಡ್ಡಿಪಡಿಸಿದವು, ಆದ್ದರಿಂದ ಪಕ್ಷ 'ಜನಾಶೀರ್ವಾದ ಯಾತ್ರೆ' ನಡೆಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಸಚಿವರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ 'ಜನಾಶೀರ್ವಾದ ಯಾತ್ರೆ' ನಡೆಸಲಿದ್ದಾರೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನೇತೃತ್ವದ ತಂಡ ಆಗಸ್ಟ್ 16ರಂದು ಹುಬ್ಬಳ್ಳಿ, 17ರಂದು ಕೊಡಗು ಮತ್ತು ದಕ್ಷಿಣ ಕನ್ನಡ, 18ರಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ, 19ರಂದು ಬೆಂಗಳೂರು ನಗರದಲ್ಲಿ ಯಾತ್ರೆ ನಡೆಸಲಿದೆ. ಸಚಿವ ಭಗವಂತ ಖೂಬಾ ನೇತೃತ್ವದ ತಂಡ ಆಗಸ್ಟ್ 16ಕ್ಕೆ ಬಳ್ಳಾರಿ, 17ಕ್ಕೆ ರಾಯಚೂರು ಮತ್ತು ಯಾದಗಿರಿ, 18ಕ್ಕೆ ಕಲಬುರಗಿ ಮತ್ತು ಬೀದರ್‌ನಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಿದೆ.
ಸಚಿವ ನಾರಾಯಣಗೌಡರ ನೇತೃತ್ವದ ತಂಡ ಆಗಸ್ಟ್ 17ರಂದು ಬೆಂಗಳೂರು ಗ್ರಾಮೀಣ ಮತ್ತು ತುಮಕೂರು, 18ಕ್ಕೆ ಚಿತ್ರದುರ್ಗ ಮತ್ತು ದಾವಣಗೆರೆ, 19ರಂದು ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಸಂಚಾರ ನಡೆಸಲಿದೆ. ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ತಂಡ ಆಗಸ್ಟ್ 17ರಂದು ಮಂಡ್ಯ ಮತ್ತು ಚಾಮರಾಜನಗರ, 18ರಂದು ಮೈಸೂರು ಮತ್ತು ಹಾಸನ, ಆಗಸ್ಟ್ 20 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದೆ.