ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ರಿವರ್ಸ್ ಆಪರೇಷನ್ಗೆ ಬಿಜೆಪಿ ಬ್ರೇಕ್ ಹಾಕಿದೆ. ಮೈತ್ರಿ ನಾಯಕರು ಸಂಪರ್ಕ ಮಾಡಲೆತ್ನಿಸಿದ್ದ ಐವರನ್ನೂ ಹಿಡಿದಿಟ್ಟುಕೊಳ್ಳುವಲ್ಲಿ ಕಮಲ ನಾಯಕರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರು, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಗೆ ಗಾಳ ಹಾಕಿದ್ದ ಮೈತ್ರಿ ನಾಯಕರು ಅವರನ್ನು ಸೆಳೆಯುವ ಯತ್ನ ಮಾಡಿದ್ದರು. ಆದರೆ ರಿವರ್ಸ್ ಆಪರೇಷನ್ ವಿಷಯ ತಿಳಿದ ಬಿಜೆಪಿ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗ್ತಿದೆ.
ಕನಕಗಿರಿ ಶಾಸಕ ಬಸವರಾಜ್ ದಡೇಸೂಗೂರು ಅವರನ್ನು ಕರೆದು ಕ್ಲಾಸ್ ತೆಗೆದುಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರು ಬಿಟ್ಟು ಹೋಗದಂತೆ ತಾಕೀತು ಮಾಡಿದ್ದರು. ಜೊತೆಗೆ ಅವರ ಜವಾಬ್ದಾರಿಯನ್ನು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರಿಗೆ ವಹಿಸಿದ್ದಾರೆ. ಹಾಗಾಗಿ ರೇಣುಕಾಚಾರ್ಯ ಸದಾ ದಡೇಸೂಗೂರು ಜೊತೆಯಲ್ಲಿಯೇ ತಿರುಗಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಹಿರಿಯೂರಿನ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕೂಡ ಡಾಲರ್ಸ್ ಕಾಲೋನಿ ಮನೆಗೆ ಕರೆಸಿಕೊಂಡು ಕಿವಿಮಾತು ಹೇಳಿ ಕಳುಹಿಸಲಾಗಿದೆ. ಸತೀಶ್ ರೆಡ್ಡಿ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಯಡಿಯೂರಪ್ಪ ಅವರ ಜವಾಬ್ದಾರಿಯನ್ನು ಅಶೋಕ್ಗೆ ವಹಿಸಿದ್ದಾರೆ.
ಇನ್ನು ಗೂಳಿಹಟ್ಟಿ ಶೇಖರ್, ವೆಂಕಟರೆಡ್ಡಿ ಮುದ್ನಾಳ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಶಾಸಕಾಂಗ ಸಭೆಗೆ ಬರುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಐದೂ ಶಾಸಕರು ತಾವು ಯಾವುದೇ ಪಕ್ಷದ ಸಂಪರ್ಕದಲ್ಲಿ ಇಲ್ಲ. ಬಿಜೆಪಿ ಬಿಡಲ್ಲ, ನಿಮ್ಮ ಜೊತೆಯಲ್ಲಿಯೇ ಇರುತ್ತೇವೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರ ಎಂದೇ ಹೇಳಿದ್ದಾರೆ.
ಆದರೂ ಈ ಐವರು ಶಾಸಕರ ಜವಾಬ್ದಾರಿಯನ್ನು ಪ್ರಮುಖ ನಾಯಕರಿಗೆ ವಹಿಸಿದ್ದು, ಪಕ್ಷದ ಜೊತೆಯಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಈ ಮೂಲಕ ರಿವರ್ಸ್ ಆಪರೇಷನ್ಗೆ ಬಿಜೆಪಿ ಬ್ರೇಕ್ ಹಾಕುವಲ್ಲಿ ಸಫಲವಾಗಿದೆ ಎಂದು ಹೇಳಲಾಗ್ತಿದೆ.