ಬೆಂಗಳೂರು: ರಾಜ್ಯ ಬಿಜೆಪಿಯ ಮಹತ್ವಾಕಾಂಕ್ಷಿ ಬೂತ್ ವಿಜಯ ಅಭಿಯಾನ ಆರಂಭಗೊಂಡಿದೆ. ಕಾರ್ಯಕರ್ತರ ಮನೆಗಳಿಗೆ ಸಾಂಕೇತಿಕವಾಗಿ ಧ್ವಜ ಕಟ್ಟುವ ಮೂಲಕ 10 ದಿನಗಳ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬೆಂಗಳೂರಿನ ವಸಂತನಗರದ ರಜಪೂತ್ ಭವನದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮನೆಮನೆಗೆ ಬಾವುಟ ಕಟ್ಟುವುದಕ್ಕೂ ಸಿಎಂ ಚಾಲನೆ ನೀಡಿದರು. ಸ್ಥಳೀಯ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ತೆರಳಿದ ಸಿಎಂ, ಅಭಿಯಾನದ ಉದ್ದೇಶ ವಿವರಿಸುತ್ತಾ ಪಕ್ಷದ ಧ್ವಜವನ್ನು ಕಾರ್ಯಕರ್ತರ ಮನೆಗೆ ಕಟ್ಟಿದರು. ಮೂರು ಮನೆಗಳಿಗೆ ಸಿಎಂ ಧ್ವಜ ಕಟ್ಟುವ ಮೂಲಕ ಸಾಂಕೇತಿಕವಾಗಿ ಧ್ವಜ ಕಟ್ಟುವ ಅಭಿಯಾನಕ್ಕೆ ಚಾಲನೆ ನೀಡಿದರು.
ಬಾವುಟ ಕಟ್ಟಿದ ಬಳಿಕ ಬಿಜೆಪಿ ಬೂತ್ ಕಮಿಟಿ ಸಭೆಯಲ್ಲಿ ಭಾಗಿಯಾದ ಸಿಎಂ, ಯಾವ ರೀತಿ ಅಭಿಯಾನ ನಡೆಸಬೇಕು ಎನ್ನುವ ಕುರಿತು ಬೂತ್ ಸಮಿತಿಗಳಿಗೆ ಮಾರ್ಗದರ್ಶನ ನೀಡಿದರು. ಇಂದಿನಿಂದ ಆರಂಭಗೊಂಡಿರುವ ಅಭಿಯಾನ ಜನವರಿ 12ರವರೆಗೂ ನಡೆಯಲಿದೆ. ಬಿಜೆಪಿ ಸಂಘಟನಾತ್ಮಕ 39 ಜಿಲ್ಲೆ, 312 ಮಂಡಳ, 1,445 ಮಹಾಶಕ್ತಿ ಕೇಂದ್ರ 11,642 ಶಕ್ತಿ ಕೇಂದ್ರ, 58,186 ಬೂತ್‌ಗಳಲ್ಲಿ ಅಭಿಯಾನ ಆರಂಭಗೊಂಡಿದೆ. ಶಿವಾಜಿನಗರದಲ್ಲಿ ಸಿಎಂ ಅಭಿಯಾನಕ್ಕೆ ಚಾಲನೆ ನೀಡಿದರೆ, ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಅಭಿಯಾನಕ್ಕೆ ಚಾಲನೆ ನೀಡಿದರು. ಅವರವರ ಕ್ಷೇತ್ರಗಳಲ್ಲಿ ಶಾಸಕರು, ಸಂಸದರು ಹಾಗೂ ಬಿಜೆಪಿ ನಾಯಕರು ವಿಶೇಷ ಅಭಿಯಾನದಲ್ಲಿ ಭಾಗಿಯಾಗಿ ಚಾಲನೆ ನೀಡಿದ್ದಾರೆ.
ಈ ಅಭಿಯಾನದಲ್ಲಿ 20 ಲಕ್ಷ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಬೂತ್ ಸಮಿತಿ ಪರಿಶೀಲನೆ ನಡೆಸುವುದು, ಪೇಜ್ ಪ್ರಮುಖರ ನಿಯುಕ್ತಿಗೊಳಿಸುವುದು, ವಾಟ್ಸ್ಆ್ಯಪ್ ಗ್ರೂಪ್ ಕ್ರಿಯೆಟ್ ಮಾಡುವುದು. 50 ಲಕ್ಷ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸುವುದು. ಪ್ರಧಾನಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಜನತೆಗೆ ತಲುಪಿಸುವುದು ಈ ಬೂತ್ ವಿಜಯ ಕಾರ್ಯಕ್ರಮದ ಉದ್ದೇಶವಾಗಿದೆ.
ವೆಂಕಟೇಶ್ವರ ದೇಗುಲಕ್ಕೆ ಭೇಟಿ: ವಸಂತನಗರ ಮನೆ ಮನೆಗೆ ಫ್ಲಾಗ್ ಕಟ್ಟಿದ ನಂತರ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ವೆಂಕಟೇಶ್ವರನಿಗೆ ಭಕ್ತಿ ಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಮೆಟ್ಟಿಲಿಗೆ ತಲೆ ಬಾಗಿ, ಸ್ವಲ್ಪ ಹೊತ್ತು ಹಾಗೆಯೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: ಸಿಎಂ ನಾನು ಆಗೋದಲ್ಲ ಅದು ಹೈಕಮಾಂಡ್ ಪ್ರಸಾದ: ಡಿಕೆಶಿ ಸ್ಪಷ್ಟ ನುಡಿ