ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಅತ್ಯಂತ ವ್ಯವಸ್ಥಿತವಾಗಿ ವಿಫಲಗೊಳಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡಿದೆ.
ಕನಕಪುರದ ಮೇಕೆದಾಟು ಸಂಗಮದಿಂದ ಕಾಂಗ್ರೆಸ್ ಎರಡು ಹಂತದಲ್ಲಿ ಪಾದಯಾತ್ರೆ ನಡೆಸಿದ್ದು, ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿತ್ತು.
ಯೋಜನೆಯ ತಡೆಗೆ ತಮಿಳುನಾಡಿನ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ ಹಾಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಪರವಾನಗಿ ಸಿಗದೆ ಯೋಜನೆಯ ಅನುಷ್ಠಾನಕ್ಕೆ ಹಿಂದೇಟು ಉಂಟಾಗುತ್ತಿದೆ.
ಬಜೆಟ್ನಲ್ಲಿ ಹಣ ಮೀಸಲಿಡದಿದ್ದರೆ ಅಧಿವೇಶನದಲ್ಲಿ ಈ ವಿಷಯವಾಗಿ ಗಂಭೀರ ಚರ್ಚೆಯ ಬಗ್ಗೆ ಚಿಂತಿಸಲಾಗಿತ್ತು. ಆದರೆ ಬಜೆಟ್ನಲ್ಲಿ ಹಣ ಮೀಸಲಿಟ್ಟ ಕಾರಣ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಬಜೆಟ್ನಲ್ಲಿ 1000 ಕೋಟಿ ಹಣ ಮೀಸಲಿಟ್ಟಿರುವ ಸರ್ಕಾರ ಯೋಜನೆಯ ಜಾರಿಗೆ ಸುಪ್ರೀಂನ ತೀರ್ಪು ಮತ್ತು ಕೇಂದ್ರದ ಆದೇಶಕ್ಕೆ ಕಾಯುತ್ತಿದೆ.
ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಪರವಾನಗಿ ಸಾಧ್ಯವಿಲ್ಲ. ಹೀಗಾಗಿ ಬಿಡುಗಡೆ ಮಾಡಿರುವ ಹಣ ಸರ್ಕಾರಿ ಬೊಕ್ಕಸದಲ್ಲೇ ಇರಲಿದೆ. ಸರ್ಕಾರ ಹಣ ಮೀಸಲಿಟ್ಟ ಕಾರಣ 10 ದಿನದ ಪಾದಯಾತ್ರೆ ಹೆಚ್ಚು ಕಮ್ಮಿ ವಿಫಲವಾದಂತಾಗಿದೆ. ಪಾದಯಾತ್ರೆಯಿಂದ ಕಾಂಗ್ರೆಸ್ಗೆ ಹೇಳಿಕೊಳ್ಳುವಂತಹ ಲಾಭವೇನು ಆಗಿಲ್ಲ, ನಾಯಕರ ನಡುವಿನ ವೈಮನಸ್ಸು ಜನರಿಗೆ ತಿಳಿಯುವಂತಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕಾಂಗ್ರೆಸ್ ಒಡಕು ಬಹಿರಂಗ: ಎರಡನೇ ಹಂತದ ಪಾದಯಾತ್ರೆಯಲ್ಲೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಕಾಣಿಸಿಕೊಂಡಿತ್ತು. ಪಾದಯಾತ್ರೆಯುದ್ದಕ್ಕೂ ಇಬ್ಬರು ನಾಯಕರು ಒಟ್ಟಾಗಿ ಹೆಜ್ಜೆ ಹಾಕಿದ್ದು ಕಮ್ಮಿಯೇ. ಈ ನಡುವೆ ಬೆಂಬಲಿಗರ ನಡುವಿನ ವಾಗ್ದಾಳಿಯೂ ಸಹ ಬಿರುಕನ್ನು ರಾಜ್ಯಕ್ಕೆ ತಿಳಿಸಿದಂತಾಗಿದೆ.
ಬೆಂಗಳೂರು ನಗರ ಪ್ರವೇಶಿಸಿದ ನಂತರ ದಿಪಾಂಜಲಿ ನಗರ, ವಿಜಯನಗರ, ಬಿಟಿಎಂ ಲೇಔಟ್ಗಳಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಹೆಚ್ಚಾಗಿ ಕಂಡು ಬಂದರು. ಶಾಂತಿನಗರ ಕ್ಷೇತ್ರ ವ್ಯಾಪ್ತಿಗೆ ಆಗಮಿಸುತ್ತಿದ್ದಂತೆ ಹ್ಯಾರಿಸ್ ನೇತೃತ್ವದ ತಂಡ ಡಿಕೆಶಿ ಅವರನ್ನು ಬೆಂಬಲಿಸಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಯಿತು. ಈ ನಡುವೆ ನಲಪಾಡ್ ಮತ್ತು ಮಾಜಿ ಮೇಯರ್ ಸಂಪತ್ ರಾಜ್ ನಡುವೆ ಇರುಸುಮುರುಸು ಉಂಟಾಯಿತು.
ಅಖಂಡ ಶ್ರೀನಿವಾಸಮೂರ್ತಿ ಒಂದಿಷ್ಟು ಸಿದ್ದರಾಮಯ್ಯ ವೈಭವಕ್ಕೆ ಪ್ರಯತ್ನಿಸಿದರು. ಅದು ಅಷ್ಟೊಂದು ಸಫಲತೆ ನೀಡಲಿಲ್ಲ. ಒಟ್ಟಾರೆ ಮೂರು ದಿನದ ಪಾದಯಾತ್ರೆ ಸಂದರ್ಭ ಕೆಲವೆಡೆ ಕೆಪಿಸಿಸಿ ಅಧ್ಯಕ್ಷರ ವೈಭವ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಕೊಂಡಾಡುವ ಕಾರ್ಯ ನಡೆಯಿತು. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸಹ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಡಿಕೆ ಶಿವಕುಮಾರ್ ವೈಭವಕ್ಕೆ ಮೀಸಲಾದರು.
ಸಮಾರೋಪ ಸಮಾರಂಭಕ್ಕೆ ತಡವಾಗಿ ಆಗಮಿಸಿದ್ದರಿಂದ ಖಾಲಿ ಕುರ್ಚಿಗಳಿಗೆ ಕಾಂಗ್ರೆಸ್ ನಾಯಕರು ಭಾಷಣ ಮಾಡುವಂತಾಯಿತು. ಮಾರನೇ ದಿನ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಹಿನ್ನಡೆಯಾಯಿತು.
ಕೇಂದ್ರದಿಂದ ಒಪ್ಪಿಗೆ ಸಿಗುವವರೆಗೂ ಹೋರಾಟ: ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿದೆ. ಅದರ ಫಲವಾಗಿಯೇ ಸರ್ಕಾರ ಹಣ ಬಿಡುಗಡೆ ಮಾಡಿ ತನಗ ಆಗಬಹುದಾದ ಮುಜುಗರವನ್ನು ತಪ್ಪಿಸಿಕೊಂಡಿದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲಲ್ಲ. ಸರ್ಕಾರ ಕೇಂದ್ರ ಪರಿಸರ ಇಲಾಖೆ ಜೊತೆ ಮಾತುಕತೆ ನಡೆಸಿ ಯೋಜನೆ ಜಾರಿಗೆ ಬರುವವರೆಗೂ ಹೋರಾಡುತ್ತೇವೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆ ಸಂದರ್ಭ ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯಾದ್ಯಂತ ನಾಳೆಯಿಂದ ಗುಡುಗು ಸಹಿತ ಮಳೆ ಸಾಧ್ಯತೆ