ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿಯಲ್ಲಿ ಇಬ್ಬರು ಮಹಿಳಾ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಒಟ್ಟು 10 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ಘೋಷಣೆಯಾಗಿದೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡಿದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಂಗಣ್ಣ ಕರಡಿಯವರ ಹಿರಿಯ ಸೊಸೆ ಮಂಜುಳಾ ಅಮರೇಶ್ ಕರಡಿಗೆ ಟಿಕೆಟ್ ನೀಡಲಾಗಿದೆ.
ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದ ಎರಡನೇ ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಗುರುಮಠಕಲ್ ಕ್ಷೇತ್ರದಿಂದ ಲಲಿತಾ ಆನಾಪುರ ಅವರಿಗೆ ಟಿಕೆಟ್ ನೀಡಿದ್ದರೆ, ಕೋಲಾರ ಗೋಲ್ಡ್ ಫೀಲ್ಡ್ ಕ್ಷೇತ್ರದಿಂದ ಅಶ್ವಿನಿ ಸಂಪಂಗಿ ಅವರಿಗೆ ಟಿಕೆಟ್ ನೀಡಲಾಗಿತ್ತು.
ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ಮೊದಲ ಪಟ್ಟಿಯಲ್ಲಿ ಒಟ್ಟು 8 ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು. ಸಂಡೂರಿಗೆ ಶಿಲ್ಪಾ ರಾಘವೇಂದ್ರ, ನಾಗಮಂಗಲಕ್ಕೆ ಸುಧಾ ಶಿವರಾಮೇಗೌಡ, ಪುತ್ತೂರು ಕ್ಷೇತ್ರಕ್ಕೆ ಆಶಾ ತಿಮ್ಮಪ್ಪ, ಹಿರಿಯೂರು ಕ್ಷೇತ್ರಕ್ಕೆ ಪೂರ್ಣಿಮಾ ಶ್ರೀನಿವಾಸ್, ಕಾರವಾರದಲ್ಲಿ ರೂಪಾಲಿ ಸಂತೋಷ್ ನಾಯ್ಕ್, ಸುಳ್ಯಕ್ಕೆ ಭಗೀರಥಿ ಮರುಳ್ಯ, ಸೌದತ್ತಿ ಯಲ್ಲಮ್ಮ ಕ್ಷೇತ್ರದಿಂದ ರತ್ನಾ ವಿಶ್ವನಾಥ್ ಮಾಮನಿ ಹಾಗೂ ನಿಪ್ಪಾಣಿ ಕ್ಷೇತ್ರದಿಂದ ಶಶಿಕಲಾ ಜೊಲ್ಲೆ ಅವರಿಗೆ ಟಿಕೆಟ್ ನೀಡಲಾಗಿತ್ತು. ಈವರೆಗೆ ಬಿಡುಗಡೆಯಾದ ಒಟ್ಟು ಸ್ಥಾನಗಳಲ್ಲಿ 12 ಮಹಿಳೆಯರಿಕೆ ಟಿಕೆಟ್ ನೀಡಿದಂತಾಗಿದೆ. ಈವರೆಗೆ 222 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗಿದ್ದು, ಕೇವಲ ಎರಡು ಕ್ಷೇತ್ರಗಳನ್ನು ಮಾತ್ರವೇ ಬಾಕಿ ಉಳಿಸಿಕೊಂಡಿದೆ. ಆ ಕ್ಷೇತ್ರಗಳು ಎಂದರೆ ರಾಯಚೂರಿನ ಮಾನ್ವಿ ಮತ್ತು ಶಿವಮೊಗ್ಗ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಬೇಕಿದೆ.
ಇದನ್ನೂ ಓದಿ: ಬಿಜೆಪಿ 3ನೇ ಪಟ್ಟಿ ರಿಲೀಸ್: ಜಗದೀಶ್ ಶೆಟ್ಟರ್ ವಿರುದ್ಧ ಟೆಂಗಿನಕಾಯಿ; ಮಹದೇವಪುರಕ್ಕೆ ಮಂಜುಳಾ ಲಿಂಬಾವಳಿ