ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಂಡಾಯದ ಭೀತಿಯಿಂದ ತಲ್ಲಣಿಸತೊಡಗಿವೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಎರಡು ರಾಷ್ಟ್ರೀಯ ಪಕ್ಷಗಳು ನಲವತ್ತಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಎದುರಿಸುವುದು ನಿಶ್ಚಿತವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಬಂಡಾಯದ ಭೀತಿಯಿಂದ ತತ್ತರಿಸುತ್ತಿರುವುದರಿಂದ ಹಲವು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಲಾಭವಾಗುವ ಲಕ್ಷಣ ಕಂಡು ಬಂದಿದೆ.
ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿನಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು, ಕಳೆದ ಮೂರು ದಿನಗಳಿಂದ ಬಂಡುಕೋರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದವರನ್ನು ಸಮಾಧಾನಿಸಲು ಕಸರತ್ತು ನಡೆಸಿದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸಿಡಿದು ಬಂಡಾಯವೆದ್ದವರು, ಪಕ್ಷಕ್ಕಾಗಿ ನಾವು ದುಡಿದರೂ ಬೇರೆಯವರಿಗೆ ಮಣೆ ಹಾಕಲಾಗಿದೆ ಎಂಬ ಆಕ್ರೋಶದಿಂದ ಸ್ಪರ್ಧೆಯ ಕಣದಲ್ಲಿ ಉಳಿದಿದ್ದಾರೆ. ಕರಾವಳಿ ಮತ್ತು ಹೈದ್ರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ಬಿಜೆಪಿಗೆ ಇಂತಹ ಬಂಡುಕೋರರು ತಲೆನೋವಾಗಿದ್ದರೆ, ಮುಂಬೈ ಕರ್ನಾಟಕ, ಹೈದರಾಬಾದ್-ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಂಡುಕೋರರ ಹಾವಳಿಗೆ ತಲ್ಲಣಗೊಂಡಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಇಂತಹ ಬಂಡಾಯವನ್ನು ನಿರೀಕ್ಷಿಸಿದ್ದವಲ್ಲದೆ, ಚುನಾವಣೆ ಅಧಿಸೂಚನೆ ಹೊರಡುವ ಮುನ್ನವೇ ಇಂತಹ ಹಾವಳಿಯನ್ನು ತಡೆಯಲು ಪ್ರಯತ್ನಿಸಿದ್ದವು. ಸಾಧ್ಯವಾದಷ್ಟು ಮಟ್ಟಿಗೆ ಒಂದು ಕ್ಷೇತ್ರದಲ್ಲಿ ಒಬ್ಬರೇ ಸ್ಪರ್ಧಿಸುವಂತೆ ನೋಡಿಕೊಳ್ಳುವುದು ರಾಷ್ಟ್ರೀಯ ಪಕ್ಷಗಳ ಉದ್ದೇಶವಾಗಿತ್ತಾದರೂ, ಅದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.
ಚುನಾವಣಾ ಸಮೀಕ್ಷೆಗಳ ಪ್ರಕಾರ, ಎಲ್ಲಿ ಅಲ್ಪ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆಯೋ ಅಂತಹ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಅಥವಾ ಮೂವರನ್ನು ಕಣಕ್ಕಿಳಿಸಲು ಬಿಜೆಪಿ ಕುಮ್ಮಕ್ಕು ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ಕೂಡಾ ಅನುಸರಿಸಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು, ಈ ಸಂಬಂಧದ ಕೂಗು ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಕೇಳಿ ಬರುತ್ತಿದೆ. ಇನ್ನು ಜೆಡಿಎಸ್ನಲ್ಲಿ ಅಷ್ಟಾಗಿ ಬಂಡಾಯದ ಬಿಸಿ ತಟ್ಟದಿದ್ದರೂ, ಮಂಡ್ಯದಲ್ಲಿ ಹಾಲಿ ಶಾಸಕ ಎಂ. ಶ್ರೀನಿವಾಸ್ ಬಂಡಾಯ ಎದ್ದಿದ್ದು, ಇದರ ಜೊತೆಗೆ ಇದೇ ಕ್ಷೇತ್ರದಿಂದ ಮತ್ತಿಬ್ಬರು ಬಂಡಾಯ ಎದ್ದು ನಾಮಪತ್ರ ಸಲ್ಲಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಇತರ ಕ್ಷೇತ್ರಗಳಲ್ಲಿ ಜೆಡಿಎಸ್ ಬಂಡಾಯದ ಬಿಸಿ ಇಲ್ಲ. ಬಂಡಾಯ ಎದ್ದಿರುವ ನಾಯಕರನ್ನು ಸಮಾಧಾನಪಡಿಸಲು ಗೌಡರ ಕುಟುಂಬ ಅಖಾಡಕ್ಕೆ ಇಳಿದಿದ್ದು, ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕು.
ಏಪ್ರಿಲ್ 13 ರಂದು ನಾಮಪತ್ರ ಸಲ್ಲಿಸುವ ಕಾರ್ಯ ಆರಂಭಗೊಂಡಿದ್ದು, ಏಪ್ರಿಲ್ ಇಪ್ಪತ್ತರಂದು ಕೊನೆಗೊಂಡಿತ್ತು. ಅಭ್ಯರ್ಥಿಗಳು ನಾಮಪತ್ರ ಪರಿಶೀಲನೆ ಕಾರ್ಯ ಏಪ್ರಿಲ್ 21 ರಂದು ಪೂರ್ಣಗೊಂಡಿತ್ತಲ್ಲದೆ, ನಾಮಪತ್ರ ಹಿಂಪಡೆಯಲು ಇಂದು (ಏಪ್ರಿಲ್ 24 ) ಕೊನೆಯ ದಿನವಾಗಿದೆ. ಹೀಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಾಳೆಯಗಳಲ್ಲಿ ಅಸಮಾಧಾನಿತರನ್ನು ಸಮಾಧಾನಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಆದರೆ ಈ ಕಸರತ್ತು ದೊಡ್ಡ ಮಟ್ಟದಲ್ಲಿ ಫಲ ಕೊಡದೆ ಇರುವುದರಿಂದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ತಲ್ಲಣಗೊಂಡಿವೆ.
ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ ಬಂಡಾಯ: ಸಂಧಾನಕ್ಕೆ ಮುಂದಾದ ಹೆಚ್ಡಿಡಿ ಪುತ್ರ ರಮೇಶ್