ಬೆಂಗಳೂರು: ಹುಳಿಮಾವು ಕೆರೆ ಕೊಡಿ ಒಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಅಪಾರ್ಟ್ಮೆಂಟ್ನ ಕೆಳಮಹಡಿಗಳಲ್ಲಿ ನಿಲ್ಲಿಸಿದ್ದ ನೂರಾರು ಕಾರುಗಳು ಎರಡು ದಿನಗಳ ಕಾಲ ನೀರಿನಲ್ಲಿ ಇದ್ದ ಕಾರಣ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ಮೌಲ್ಯದ ಕಾರಗಳು ನಾಶವಾಗಿವೆ. ಹೀಗಾಗಿ ನಮಗೆ ಬಿಬಿಎಂಪಿ ಸರಿಯಾದ ಪರಿಹಾರ ನೀಡದೇ ಇದ್ದರೆ, ಕೋರ್ಟ್ ಮೆಟ್ಟಿಲು ಏರುವುದಾಗಿ ಅಲ್ಲಿನ ನಿವಾಸಿಗಳು ಎಚ್ಚರಿಕೆ ರವಾನಿಸಿದ್ದಾರೆ.
ಪರಿಹಾರ ನೀಡುತ್ತೇವೆ ಎನ್ನುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಾವು ಯಾವುದೇ ಕಾರಣಕ್ಕೂ ಪರಿಹಾರ ನೀಡುವುದಿಲ್ಲ ಎಂದು ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಇದು ಹುಳಿಮಾವು ಸಂತ್ರಸ್ಥರನ್ನು ರೊಚ್ಚಿಗೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ನಷ್ಟಕ್ಕೊಳಗಾಗಿರುವ ಕಾರುಗಳ ಮಾಲೀಕರು ನಾವು ಪ್ರಧಾನಮಂತ್ರಿಗೆ ಪತ್ರ ಬರೆಯಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಇದು ಪ್ರಕೃತಿ ವಿಕೋಪವಾಗಿದ್ದರೆ ನಾವು ಸುಮ್ಮನಾಗುತ್ತಿದ್ದೆವು. ಯಾರದೋ ಬೇಜವಾಬ್ದಾರಿಗೆ ನಮ್ಮ ಮನೆಯ ವಸ್ತುಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ, ನಮಗೆ ಅಲ್ಪಸ್ವಲ್ಪ ಹಣದ ಅವಶ್ಯಕತೆ ಇಲ್ಲ ದಯವಿಟ್ಟು ಸಂಪೂರ್ಣ ಕಾರನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಸಿಕೊಡಿ ಇಲ್ಲವೇ ಕೋರ್ಟ್ ಮೆಟ್ಟಿಲೇರುತ್ತೇವೆ ಎನ್ನುತ್ತಿದ್ದಾರೆ ಕಾರಿನ ಮಾಲೀಕರು.