ಬೆಂಗಳೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಮುನ್ನುಡಿ ಬರೆದಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಇವಿ ಬೈಕ್ ಟ್ಯಾಕ್ಸಿ ಯೋಜನೆ ಪರಿಚಯಿಸುವ ಮೂಲಕ ಬೈಕ್ ಟ್ಯಾಕ್ಸಿಗಳ ಎಂಟ್ರಿಗೆ ಗ್ರೀನ್ ಸಿಗ್ನಲ್ ನೀಡಿದರು. ಪರಿಣಾಮ ಇಂದು ಕೇವಲ ಇವಿ ಬೈಕ್ ಮಾತ್ರವಲ್ಲದೆ ಇಂಧನ ಆಧಾರಿತ ಬೈಕ್ಗಳೂ ಬೈಕ್ ಟ್ಯಾಕ್ಸಿ ಹೆಸರಿನಲ್ಲಿ ರಸ್ತೆಗಿಳಿದಿವೆ. ಇದೇ ಈಗ ವಿವಾದಕ್ಕೆ ಕಾರಣವಾಗಿದ್ದು, ಆಟೋ ಚಾಲಕರು ಮತ್ತು ಮಾಲೀಕರು ಮುಷ್ಕರಕ್ಕೆ ಇಳಿಯುವಂತೆ ಮಾಡಿದೆ.
2021 ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ರಾಜ್ಯದಲ್ಲಿ 'ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ' ಪ್ರಾರಂಭಕ್ಕೆ ಅನುಮತಿ ನೀಡಿದರು. ಈ ಯೋಜನೆಯಡಿ ವ್ಯಕ್ತಿಗಳು, ಪಾಲುದಾರಿಕೆ ಸಂಸ್ಥೆಗಳು ಮತ್ತು ಕಂಪನಿಗಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಯಿತು. ಆ ಮೂಲಕ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿಗಳ ಸೇವೆ ಆರಂಭವಾಯಿತು.
ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ಇಚ್ಛಿಸುವವರು ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು, ಪರವಾನಿಗೆ ಪಡೆದ ನಂತರವೇ ಇವಿ ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ಅನುಮತಿಸಲಾಗುತ್ತದೆ. ಅಗ್ರಿಗೇಟರ್ಗಳ ಮೂಲಕ ಇ ಬೈಕ್ ಟ್ಯಾಕ್ಸಿ ಸೇವೆ ನೀಡಬಹುದಾಗಿದ್ದು, ಸೇವೆ ಒದಗಿಸುವ ಕಂಪನಿಗಳು ಇವಿ ಬೈಕ್ ಟ್ಯಾಕ್ಸಿ ಸವಾರ ಮತ್ತು ಮಾಲೀಕರಿಗೆ ವಿಮಾ ರಕ್ಷಣ ಒದಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿದೆ. ಇದರಂತೆ ವಿವಿಧ ಕಂಪನಿಗಳು ಬೆಂಗಳೂರಿನಲ್ಲಿ ಇವಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿವೆ. ಇವುಗಳಲ್ಲಿ ಬೌನ್ಸ್ ಕಂಪನಿ ಪ್ರಮುಖ. ಸರ್ಕಾರದ ಅನುಮತಿ ಪಡೆದು 100 ಇವಿ ಬೈಕ್ಗಳನ್ನು ರಸ್ತೆಗಿಳಿಸಿತ್ತು.
ಬೈಕ್ ಟ್ಯಾಕ್ಸಿ ಸೇವೆ ಬಳಸಲು ವಯಸ್ಸಿನ ಮಿತಿ: ಇವಿ ಬೈಕ್ ಟ್ಯಾಕ್ಸಿಗೆ ವ್ಯಾಪ್ತಿಯನ್ನು ಪಾಲಿಸಿಯಲ್ಲಿಯೇ ನಿಗದಿಪಡಿಸಲಾಗಿದೆ. 10 ಕಿಲೋಮೀಟರ್ ವರೆಗೂ ಗ್ರಾಹಕರು ಬೈಕ್ ಟ್ಯಾಕ್ಸಿಗಳ ಸೇವೆ ಪಡೆಯಬಹುದಾಗಿದೆ. 5 ಕಿಲೋಮೀಟರ್ ಗೆ 25 ರೂ. ಮತ್ತು 10 ಕಿಲೋಮೀಟ್ ವರೆಗೆ 50 ರೂ. ದರ ಹೀಗೆ ಎರಡು ಹಂತದಲ್ಲಿ ದರ ನಿಗದಿಪಡಿಸಲು ಅವಕಾಶ ನೀಡಲಾಗಿದೆ. ಅಲ್ಲದೆ 15 ವರ್ಷಕ್ಕೂ ಕಡಿಮೆ ವಯೋಮಾನದವರು ಬೈಕ್ ಟ್ಯಾಕ್ಸಿ ಸೇವೆ ಬಳಸಲು ನಿರ್ಬಂಧವಿದೆ.
ಇಷ್ಟೆಲ್ಲಾ ಇದ್ದರೂ ಇದೀಗ ಇವಿ ಬೈಕ್ಗಳ ಬದಲು ಇಂಧನ ಆಧಾರಿತ ಬೈಕ್ಗಳು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವುದು ಕಂಡುಬಂದಿದೆ. ಬೈಕ್ ಇದ್ದವರು ಅಗ್ರಿಗೇಟರ್ ಗಳ ಜೊತೆ ಒಪ್ಪಂದ ಮಾಡಿಕೊಂಡು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದಾರೆ. ಸ್ವಂತ ಉದ್ದೇಶಕ್ಕಾಗಿ ಖರೀದಿ ಮಾಡಿರುವ ವೈಟ್ ಬೋರ್ಡ್ನ ಬೈಕ್ಗಳನ್ನೇ ವಾಣಿಜ್ಯ ಉದ್ದೇಶದ ಬೈಕ್ ಟ್ಯಾಕ್ಸಿ ಸೇವೆ ನೀಡಲು ಅಲ್ಲಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಆಟೋ ಚಾಲಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ರೀತಿ ವಾಣಿಜ್ಯ ಉದ್ದೇಶಕ್ಕೆ ಪರವಾನಗಿ ಪಡೆಯದೆ ವಾಣಿಜ್ಯ ಸೇವೆ ನೀಡುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ ಎನ್ನುವ ಅಳಲು ಆಟೋ ಚಾಲಕರು ಮತ್ತು ಮಾಲೀಕರದ್ದಾಗಿದೆ.
ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಬೈಕ್ ಟ್ಯಾಕ್ಸಿ ಸೇವೆಗೆ ಬ್ರೇಕ್: ಆರಂಭದಲ್ಲಿ ಸರ್ಕಾರ ಇವಿ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ ಅನುಮತಿ ನೀಡಲು ಮುಂದಾಗಿದ್ದಕ್ಕೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆಟೋಗಳ ಪ್ರತಿರೋಧದ ನಡುವೆಯೂ ಸರ್ಕಾರ ಇವಿ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲನೆ ನೀಡಿತ್ತು. ಆದರೆ ನಂತರ 2022ರ ಕೊನೆಯಲ್ಲಿ ಆಟೋ, ಕ್ಯಾಬ್ ಚಾಲಕರ ಆಗ್ರಹಕ್ಕೆ ಮಣಿದ ಸರ್ಕಾರ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಬೈಕ್ ಟ್ಯಾಕ್ಸಿ ಸೇವೆಗೆ ಬ್ರೇಕ್ ಹಾಕಿ ಆದೇಶ ನೀಡಿತ್ತು. ಈ ವಿವಾದ ಈಗ ಕೋರ್ಟ್ನಲ್ಲಿದೆ.
ಆಪ್ ಆಧಾರಿತವಾಗಿ ಬೈಕ್ ಟ್ಯಾಕ್ಸಿ ಸೇವೆ ನೀಡಲಾಗುತ್ತಿದೆ. ವೈಟ್ ಬೋಡ್ಸ್ ಬೈಕ್ ಗಳಿಗೂ ಅನುಮತಿಸಲಾಗಿದೆ. ಇದರಿಂದಾಗಿ ತೆರಿಗೆ ಕಟ್ಟಿ ಸೇವೆ ನೀಡುತ್ತಿರುವ ಆಟೋ ಚಾಲಕರು ಮತ್ತು ಮಾಲೀಕರಿಗೆ ನಷ್ಟವಾಗುತ್ತಿದೆ. ಹಾಗಾಗಿ ಕೂಡಲೇ ಬೈಕ್ ಟ್ಯಾಕ್ಸಿ ಸೇವೆಗೆ ಬ್ರೇಕ್ ಹಾಕಿ ಎಂದು ಆಟೋ ಯೂನಿಯನ್ ಮುಖಂಡ ಮಂಜುನಾಥ್ ಆಗ್ರಹಿಸಿದ್ದಾರೆ.
ಇವಿ ಬದಲು ಇಂಧನ ಬೈಕ್ಗಳಿಂದಲೂ ಸೇವೆ: ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಕಾಲದಲ್ಲಿ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಬೈಕ್ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳುವ ಯೋಜನೆಗೆ ಅನುಮತಿಸಿದ್ದರು. ಕಂಪನಿಗಳು ವಿವಿಧ ಬೈಕ್ಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಅದರ ಮುಂದುವರೆದ ಭಾಗವಾಗಿ ಟ್ಯಾಕ್ಸಿಗಳ ರೀತಿ ಸೇವೆ ಒದಗಿಸುವ ಚಿಂತನೆಗೆ ಸಮ್ಮತಿಸಿದ್ದ ಯಡಿಯೂರಪ್ಪ ಸರ್ಕಾರ, ಇವಿ ಬೈಕ್ ಟ್ಯಾಕ್ಸಿ ಯೋಜನೆಗೆ ಒಪ್ಪಿಗೆ ನೀಡಿದ್ದರಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆ ಜಾರಿಗೆ ಬಂದಿತ್ತು. ಇದೀಗ ಅದರ ಮುಂದುವರೆದ ಭಾಗವಾಗಿ ಇವಿ ಬದಲು ಇಂಧನ ಬೈಕ್ಗಳೂ ಬೈಕ್ ಟ್ಯಾಕ್ಸಿ ಸೇವೆ ನೀಡಲು ರಸ್ತೆಗಿಳಿದಿವೆ.
ಇದನ್ನೂ ಓದಿ : ಮಾರ್ಚ್ 25, 26ರಂದು ನಮ್ಮ ಬೆಂಗಳೂರು ಹಬ್ಬ: ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ