ಬೆಂಗಳೂರು : ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ್ದ ಸಮನ್ಸ್ ಹಾಗೂ ಪ್ರಕರಣವನ್ನು ರದ್ದುಗೊಳಿಸಿರುವ ಹೈಕೋರ್ಟ್, ಮಾಜಿ ಸಚಿವ ಕೆ.ಜೆ ಜಾರ್ಜ್ ಹಾಗೂ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದೆ.
ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್ ನೀಡಿದ್ದರೂ ನ್ಯಾಯಾಲಯ ವಿಚಾರಣೆಗೆ ಹಾಜರಾಗುವುಂತೆ ಸೂಚಿಸಿ ಸಮನ್ಸ್ ಜಾರಿ ಮಾಡಲಾಗಿತ್ತು. ಸಮನ್ಸ್ ಹಾಗೂ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಪ್ರಕರಣದ ಆರೋಪಿಗಳಾಗಿದ್ದ ಮಾಜಿ ಸಚಿವ ಕೆಜೆ ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ ಪ್ರಸಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ನಿನ್ನೆ ತೀರ್ಪು ಪ್ರಕಟಿಸಿ, ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ನ್ನೇ ಎತ್ತಿಹಿಡಿದಿದೆ. ಅಲ್ಲದೇ, ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್ ಹಾಗೂ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ...
ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿ ಆಗಿದ್ದ ಎಂ.ಕೆ. ಗಣಪತಿ ಅವರ ಮೃತದೇಹ 2016ರ ಜುಲೈ 7ರಂದು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಕ್ಕೂ ಮುನ್ನ ಸ್ಥಳೀಯ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಗಣಪತಿ, ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ಕಿರುಕುಳ ನೀಡುತ್ತಿರುವ ಕುರಿತು ಆರೋಪ ಮಾಡಿದ್ದರು.
ಘಟನೆ ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಮೊದಲಿಗೆ ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ಆರೋಪಿತರಿಗೆ ಕ್ಲೀನ್ ಚಿಟ್ ನೀಡಿದ್ದರು. ಗಣಪತಿ ಕುಟುಂಬದವರು ಕಾನೂನು ಹೋರಾಟ ನಡೆಸಿದ್ದರಿಂದ 2017ರಲ್ಲಿ ಸುಪ್ರೀಂಕೋರ್ಟ್ ಪ್ರಕರಣವನ್ನು ಚೆನ್ನೈ ಸಿಬಿಐ ಅಧಿಕಾರಿಗಳ ತಂಡಕ್ಕೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸಿದ ಚೆನ್ನೈನ ಸಿಬಿಐ ಅಧಿಕಾರಿಗಳು ಆರೋಪಿತರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯ ಲಭ್ಯವಿಲ್ಲ ಎಂದು ಸೆಪ್ಟೆಂಬರ್ ತಿಂಗಳಲ್ಲಿ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿ, ಪ್ರಕರಣ ಮುಕ್ತಾಯಗೊಳಿಸುವಂತೆ ಕೋರಿದ್ದರು.
ಆದರೆ, ಬಿ ರಿಪೋರ್ಟ್ ತಿರಸ್ಕರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿತ್ತು. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ಜಾರ್ಜ್, ಮೊಹಂತಿ ಹಾಗೂ ಪ್ರಸಾದ್ರಿಗೆ ಸೂಚಿಸಿ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಮನ್ಸ್ ಮತ್ತು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮೂವರೂ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಸಮನ್ಸ್ ಮತ್ತು ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.