ಬೆಂಗಳೂರು: ಕೊರೊನಾ ಲಾಕ್‌ಡೌನ್ ಸಡಿಲಿಕೆ ಆಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ವಿರುದ್ಧ ಭಿನ್ನಮತೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯ ಅತೃಪ್ತ ಹಿರಿಯ ಶಾಸಕರ ಸಾರಥ್ಯದಲ್ಲಿ( ಈ ಹಿಂದೆ ಬಿಎಸ್ವೈ ಆಪ್ತರೆಂದೇ ಗುರುತಿಸಿಕೊಂಡ ಶಾಸಕರು) ರಹಸ್ಯವಾಗಿ ಶಾಸಕರ ಬಂಡಾಯದ ಸರಣಿ ಸಭೆಗಳು ನಡೆಯುತ್ತಿವೆ ಎನ್ನಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಬೇಕು ಹಾಗೂ ತಮಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಪ್ರಮುಖ ಬೇಡಿಕೆ ಇಟ್ಟುಕೊಂಡು ಹಿರಿಯ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಉಮೇಶ ಕತ್ತಿ, ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಭಿನ್ನಮತೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಹಲವಾರು ದಿನಗಳಿಂದ ರಹಸ್ಯವಾಗಿ ಸಭೆ ನಡೆಸುತ್ತಿರುವ ಬಿಜೆಪಿ ಬಂಡಾಯ ಶಾಸಕರು 'ನಾಯಕತ್ವ' ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಈಟಿವಿ ಭಾರತಕ್ಕೆ ಮಾಹಿತಿ ಗೊತ್ತಾಗಿದೆ.
ಶಾಸಕರ ರಹಸ್ಯ ಬಂಡಾಯ ಚಟುವಟಿಕೆಗಳು ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೂ ಸಹ ಬಂದಿದೆ. ಈ ಬಾರಿಯ ಶಾಸಕರ ಭಿನ್ನಮತೀಯ ಚಟುವಟಿಕೆಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಕುರಿತು ಮಾಹಿತಿ ಪಡೆದುಕೊಂಡಿರುವ ಸಿಎಂ, ಅತೃಪ್ತರ ಬಂಡಾಯ ಶಮನಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
ಭಿನ್ನಮತೀಯ ಶಾಸಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಅವರ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಸಿಎಂ ಅವರ ಆಶ್ವಾಸನೆಗೆ ಹೆಚ್ಚಿನ ಮನ್ನಣೆಯನ್ನು ಬಂಡಾಯ ಶಾಸಕರು ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.