ಬೆಂಗಳೂರು: ನಗರದ ಜಿಕೆವಿಕೆ ಆವರಣದಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ (Bengaluru Agricultural Fair) ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಹೋರಿಯನ್ನು ಪ್ರದರ್ಶನಕ್ಕಿಡಲಾಗಿತ್ತು.
ಬಹಳ ವಿಶೇಷವಾದ ತಳಿಯಾದ್ದರಿಂದ ಜಿಟಿಜಿಟಿ ಮಳೆಯ ನಡುವೆಯೂ ಜನ 'ಕೃಷ್ಣ' (ಹೋರಿ)ನನ್ನು ಬೆರಗುಗಣ್ಣಿನಿಂದ ನೋಡಿ ಖುಷಿಪಟ್ಟರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಿಂದ ಒಡೆಯನಸಹಿತ ಬಂದಿದ್ದ 'ಕೃಷ್ಣ' ಉದ್ದನೆಯ ಹಾರ ಧರಿಸಿ ಅಲಂಕಾರಗೊಂಡಿದ್ದ. ಈತನ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿಗೂ ಹೆಚ್ಚು.
'ದಕ್ಷಿಣ ಭಾರತದಲ್ಲೇ ಹೋರಿಗಳ ಮೂಲ ತಳಿ ಈ ಹಳ್ಳಿಕಾರ್. ಸದ್ಯ ಇದು ನಶಿಸಿ ಹೋಗುತ್ತಿರುವ ತಳಿಯಾಗಿದೆ. ಕೃಷ್ಣನನ್ನು ಉತ್ತಮ ಗುಣಮಟ್ಟದ ಬಿತ್ತನೆಗಾಗಿ ಬಳಸಲಾಗುತ್ತದೆ. ಪ್ರೌಢಾವಸ್ಥೆಗೆ ಬಂದ ನಂತರ ಸಂತಾನೋತ್ಪತ್ತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಹಳ್ಳಿಕಾರ್ ಕರುಗಳು ಹುಟ್ಟಲು ಸಾಧ್ಯ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದಲೂ ಬೇಡಿಕೆ ಇದೆ. ಹೀಗಾಗಿ, ಕೃಷ್ಣನ ಬೆಲೆ ಕೋಟಿಗಟ್ಟಲೆ' ಎಂದು ಹೋರಿಯ ಮಾಲೀಕ ಬೋರೇಗೌಡ ತಿಳಿಸಿದರು.
ಕೃಷ್ಣ ಹೋರಿಗೆ 3 ವರ್ಷ 8 ತಿಂಗಳು ವಯಸ್ಸಾಗಿದೆ. ಇದು 15-20 ವರ್ಷ ಬದುಕಬಲ್ಲದು. ತಿಂಗಳಿಗೆ ಎಂಟು ಬಾರಿ ಸಂತಾನೋತ್ಪತ್ತಿಗೆ ಇದರಿಂದ ವೀರ್ಯಾಣು ಸಂಗ್ರಹಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಮೊದಲನೇ ದಿನದ ಕೃಷಿ ಮೇಳಕ್ಕೆ ಮಳೆರಾಯನ ಅಡ್ಡಿ: ವ್ಯಾಪಾರಿಗಳಲ್ಲಿ ನಿರಾಶೆ