ಬೆಂಗಳೂರು: ಅಂಬಿಕಾಪತಿ ಕಾಂಗ್ರೆಸ್ ಪಾರ್ಟಿನಾ?. ಅವರು ಜೆಡಿಎಸ್‌ನವರು ಎಂದು ಸಚಿವ ಬೈರತಿ ಸುರೇಶ್ ಹೇಳಿದರು. ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಐಟಿ ರೇಡ್ ಬಗ್ಗೆ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರು ಐಟಿ ರೇಡ್ ಮಾಡಿಸಿಕೊಂಡಿದ್ದಾರೋ ಅವರದ್ದೇ ದುಡ್ಡು ಅಂತ ನಿಮಗೂ ಗೊತ್ತು. ಅವರು ದುಡ್ಡು ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷವು ಇದು ಬಿಜೆಪಿ ದುಡ್ಡು, ಜೆಡಿಎಸ್ ದುಡ್ಡು ಎಂದು ಹೇಳ್ತಿಲ್ಲ. ಕಾಂಟ್ರಾಕ್ಟರ್ಸ್ ಬಳಿ ಹಣ ಸಿಕ್ಕಿದೆ, ಅದಕ್ಕೆ ಅವರು ಉತ್ತರ ಕೊಡ್ತಾರೆ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸುತ್ತಾರೆ. ಅಂಬಿಕಾಪತಿಯನ್ನು ನಾನು ಇದುವರೆಗೂ ನೋಡೇ ಇಲ್ಲ. ಆಮೇಲೆ ನಂಗೆ ಗೊತ್ತಾಯ್ತು ಅಖಂಡ ಶ್ರೀನಿವಾಸ ಮೂರ್ತಿಯ ಭಾವ ಅಂತ. ಜೆಡಿಎಸ್‌ನಿಂದ ಕಾರ್ಪೋರೇಟರ್ ಆಗಿದ್ದರು ಅಂತ ಇವತ್ತು ಬೆಳಿಗ್ಗೆ ಗೊತ್ತಾಯ್ತು. ಅವರ ಮಗನೇ ಹೇಳಿದ್ದಾರೆ ಇದು ತಮ್ಮದೇ ದುಡ್ಡು ಅಂತ. ಅಲ್ಲದೇ ಟ್ಯಾಕ್ಸ್ ಕೂಡ ಸರಿಯಾಗಿ ಕಟ್ಟಿರುವುದಾಗಿಯೂ ಹೇಳಿದ್ದಾರೆ ಎಂದರು. ಇನ್ನು, ಗುತ್ತಿಗೆದಾರ ಸಂತೋಷ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಸಂತೋಷ ಅನ್ನೋರು ಯಾರು ಅಂತಾನೇ ಗೊತ್ತಿಲ್ಲ ಎಂದು ಹೇಳಿದರು.
ಕಳೆದ ನಾಲ್ಕು ದಿನಗಳ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮತ್ತು ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ದಂಪತಿಗೆ ಸೇರಿದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ನಿವಾಸದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಆಗ ಅಂಬಿಕಾಪತಿ ಪುತ್ರ ಪ್ರದೀಪ್ ಮನೆಯಲ್ಲಿ ಮಂಚದ ಕೆಳಗಿದ್ದ 22 ಬಾಕ್ಸ್‌ಗಳಲ್ಲಿ 500 ರೂ. ಮುಖ ಬೆಲೆಯ 42 ಕೋಟಿ ರೂ.ಗಳ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದವು.
ಐಟಿ ಅಧಿಕಾರಿಗಳು ರಾತ್ರಿಯಿಡೀ ಫ್ಲ್ಯಾಟ್‌ನಲ್ಲೇ ಇದ್ದು ಪರಿಶೀಲನೆ ನಡೆಸುವಾಗ ಎರಡು ಸೂಟ್‌ಕೇಸ್ ಪತ್ತೆಯಾಗಿದ್ದವು. ಅದರಲ್ಲಿ ಅಂಬಿಕಾಪತಿ ಮತ್ತು ಅಶ್ವತ್ಥಮ್ಮ ದಂಪತಿ ಹೆಸರಿನ ಆಸ್ತಿಗೆ ಸಂಬಂಧಪಟ್ಟ ಕೆಲವು ದಾಖಲೆಗಳು ಮತ್ತು ಕಡತಗಳು ಸಿಕ್ಕಿದ್ದವು. ಚಿನ್ನಾಭರಣ ಹಾಗೂ ಹಣವನ್ನು ಕ್ರೋಢೀಕರಿಸಿ ಲೆಕ್ಕ ಹಾಕಿ ಜಪ್ತಿ ಮಾಡಲಾಗಿತ್ತು. ಅಂಬಿಕಾಪತಿ ಪುತ್ರ ಪ್ರದೀಪ್‌ಗೆ ಅ.17ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು.
ಇದನ್ನೂ ಓದಿ: ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ಸೂಕ್ತ ತನಿಖೆಗೆ ಬಿ.ಎಸ್.ಯಡಿಯೂರಪ್ಪ ಆಗ್ರಹ