ಬೆಂಗಳೂರು: ಚಿಕ್ಕಮಗಳೂರಿನ ಭದ್ರಗಿರಿಯಲ್ಲಿರುವ ಶಿವಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿಗಳು ಸರ್ಕಾರಿ ಜಮೀನು ಒತ್ತುವರಿ ಮಾಡಿ ಕಲ್ಯಾಣ ಮಂಟಪ, ಅತಿಥಿ ಗೃಹ ಮತ್ತಿತರ ಕಟ್ಟಡಗಳನ್ನು ನಿರ್ಮಿಸಿರುವ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಹೊಸದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ದೇವಸ್ಥಾನದ ಆದಾಯದ ಹಣ ದುರ್ಬಳಕೆಯಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿಕೊಂಡಿತ್ತು. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಿದ್ಧಪಡಿಸಿದ್ದ ಪ್ರಮಾಣಪತ್ರವನ್ನು ಸಲ್ಲಿಸಿದರು. ಇದನ್ನು ಪರಿಶೀಲಿಸಿದ ಪೀಠ, ಕಲ್ಯಾಣ ಮಂಟಪ, ಅತಿಥಿ ಗೃಹ ಮತ್ತಿತರರ ಕಟ್ಟಡಗಳನ್ನು ನಿರ್ಮಿಸಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ತಹಶೀಲ್ದಾರ್ ವರದಿ ಹೇಳಿದೆ.
ಓದಿ: ಎಐಂಎ ಹಗರಣ: 2,695 ಕೋಟಿ ರೂ. ಠೇವಣಿ ಹಣ ವಾಪಸ್ ಕೋರಿ 65 ಸಾವಿರ ಅರ್ಜಿ ಸಲ್ಲಿಕೆ
ಹೀಗಿರುವಾಗ ಅರಣ್ಯ ಜಮೀನು ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಏಕೆ ಜರುಗಿಸಿಲ್ಲ. ಅಲ್ಲದೆ ಕಲ್ಯಾಣ ಮಂಟಪ, ಅತಿಥಿ ಗೃಹದಿಂದ ಬರುವ ಹಣವನ್ನು ಯಾರು ಸಂಗ್ರಹಿದ್ದಾರೆ, ಯಾರೆಲ್ಲಾ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿತು. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಏನೆಂಬುದನ್ನು ಸ್ಪಷ್ಟವಾಗಿ ತಿಳಿಸಿ ಮುಂದಿನ ಒಂದು ತಿಂಗಳಲ್ಲಿ ಹೊಸದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ದೇವಸ್ಥಾನದ ಟ್ರಸ್ಟಿಗಳ ಪರ ವಕೀಲರು ವಾದಿಸಿ, ಕಟ್ಟಡಗಳನ್ನು ನಿರ್ಮಿಸಿರುವ ಜಾಗ ಪಟ್ಟಾ ಜಮೀನು. ಬಹಳ ಹಿಂದೆಯೇ ಟ್ರಸ್ಟಿಗಳು ಆ ಕಟ್ಟಡಗಳನ್ನು ಕಟ್ಟಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿರುವುದು ಈಗಿನ ಟ್ರಸ್ಟಿಗಳ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿತು.