ಬೆಂಗಳೂರು : ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ಉತ್ತಮ ಶಿಕ್ಷಕರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ 20 ಶಿಕ್ಷಕರುಗಳು ಮತ್ತು ಪ್ರೌಢಶಾಲೆಯ 11 ಶಿಕ್ಷಕರುಗಳನ್ನು ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪಾಧ್ಯಾಯನಿಯರಿಗೆ ಅಕ್ಷರ ಮಾತೆ 'ಸಾವಿತ್ರಿಬಾಯಿ ಫುಲೆ' ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಎಲ್ಲಾ 31 ಶಿಕ್ಷಕರುಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ ನಗದು ಪುರಸ್ಕಾರ ನೀಡಲಾಗುತ್ತದೆ.
ಉತ್ತರ ಕನ್ನಡದ ಇಬ್ಬರಿಗೆ ಪ್ರಶಸ್ತಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಯಲ್ಲಾಪುರ ತಾಲೂಕಿನ ಕಂಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥನಿಕ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಗಣಪತಿ ನಾಯಕ ಮತ್ತು ಪ್ರೌಢಶಾಲೆಯ ವಿಭಾಗದಲ್ಲಿ ಮಾರಿಕಾಂಬಾ ಶಾಲೆಯ ಕನ್ನಡ ಶಿಕ್ಷಕ ನಾರಾಯಣ ಪರಮೇಶ್ವರ ಭಾಗ್ವತ ಅವರಿಗೆ ರಾಜ್ಯ ಪ್ರಶಸ್ತಿ ಘೋಷಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಇಬ್ಬರಿಗೆ ಬೆಸ್ಟ್ ಟೀಚರ್ ಅವಾರ್ಡ್ : ಪ್ರೌಢಶಾಲಾ ವಿಭಾಗದಿಂದ ಅರುಣಾ ನರೇಂದ್ರ ಪಾಟೀಲ್ ಸಹಶಿಕ್ಷಕರು ಪ್ರೌಢ ಶಾಲೆ ಕಿನ್ನಾಳ್ ಆಯ್ಕೆಯಾಗಿದ್ದು, ಪ್ರಾಥಮಿಕ ವಿಭಾಗದಿಂದ ವಿದ್ಯಾ ಕಂಪಾಪುರಮಠ ಸಹ ಶಿಕ್ಷಕಿ ನೆರಬೆಂಚಿ ತಾಲೂಕು ಕುಷ್ಟಗಿ ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಅರುಣಾ ನರೇಂದ್ರ ಪಾಟೀಲ ಅವರು ಶಿಕ್ಷಕಿ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಮಾರು 12 ಕ್ಕೂ ಹೆಚ್ಚು ಕೃತಿಗಳನ್ನು ಸಮಾಜಕ್ಕೆ ನೀಡಿದ್ದಾರೆ. ದಸರಾ ಕವಿಗೋಷ್ಠಿ ಸೇರಿದಂತೆ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.
ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಪಿ. ಉಮೇಶ್ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇವರ ಉತ್ತಮ ಸೇವೆಯನ್ನು ಗುರುತಿಸಿರುವ ಶಿಕ್ಷಣ ಇಲಾಖೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕೇಂದ್ರ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇದನ್ನೂ ಓದಿ : ತುಮಕೂರು ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಪೋನಸಂಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ