ಬೆಂಗಳೂರು/ತುಮಕೂರು: ಭಾರೀ ಮಳೆಗೆ ವಿದ್ಯುತ್ ಪೂರೈಕೆ ಕಡಿತಗೊಂಡ ಕಂಬದ ವಿದ್ಯುತ್ ಸಂಪರ್ಕ ಕಲ್ಪಸಲು ತೆರಳಿದ ಬೆಸ್ಕಾಂನ ಲೈನ್ಮನ್ ಮಹೇಶ್ ಗೌಡರ (38) ಗುಬ್ಬಿ ತಾಲೂಕಿನ ತಿಪ್ಪೂರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಮೊನ್ನೆ ಸೆ.10 ರಂದು ಸುರಿದ ಭಾರೀ ಮಳೆಗೆ ಗುಬ್ಬಿ ತಾಲೂಕಿನ ಹಲವೆಡೆ ಕರೆಂಟ್ ವ್ಯತ್ಯವಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಸರಿಪಡಿಸಲು ತೆರಳಿದ ಮಹೇಶ ಗೌಡರ ಕೆರೆಯಲ್ಲು ಈಜುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗುಬ್ಬಿ ಉಪ ವಿಭಾಗದ ಬಿದರೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ F6 ಜೇನಿಗರಹಳ್ಳಿ ವಿದ್ಯುತ್ ಮಾರ್ಗದ ದುರಸ್ತಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕೆರೆಯ ಮಧ್ಯದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬದ ವಿದ್ಯುತ್ ಸಂಪರ್ಕ ಮರು ಜೋಡಿಸಲು ಮಹೇಶ್ ಗೌಡರ ಕರೆಯಲ್ಲಿ ಈಜಿಕೊಂಡು ಹೋಗಿದ್ದರು. ಜತೆಯಲ್ಲಿದ್ದ ಸಿಬ್ಬಂದಿ ಎಚ್ಚರಿಸಿದ್ದರೂ ಕೂಡ ಈಜಲು ಮುಂದಾದರು. ವಿದ್ಯುತ್ ಕಂಬದಿಂದ ಸುಮಾರು 15 ಅಡಿ ದೂರದಲ್ಲಿ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಮರುದಿನ ಮೃತ ದೇಹವನ್ನು ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸೋಮವಾರ ಬಾಗಲಕೋಟದಲ್ಲಿ ಮಹೇಶ್ ಗೌಡರ ಅಂತ್ಯ ಸಂಸ್ಕಾರ ಸಹ ನೆರವೇರಿಸಲಾಗಿದೆ.
ಮೃತಪಟ್ಟ ಲೈನ್ಮನ್ ಮಹೇಶ್ ಗೌಡರ ಕುಟುಂಬಕ್ಕೆ ಜೀವ ರಕ್ಷಣೆ ಯೋಜನೆಯಡಿಯಲ್ಲಿ ರೂ.17000 ರೂಪಾಯಿಗಳನ್ನು ಪಾವತಿಸಲಾಗಿದ್ದು, ಮರಣ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಅಪಾಯದ ಅರಿವಿದ್ದರೂ ಕೂಡ ಜೀವವನ್ನು ಲೆಕ್ಕಸಿದೆ, ನಮ್ಮ ಸಿಬ್ಬಂದಿ ವಿದ್ಯುತ್ ಸಂಪರ್ಕ ಮರು ಜೋಡಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದು ದುರ್ದೈವದ ಸಂಗತಿ. ಮಹೇಶ್ ಗೌಡರ ಕುಟುಂಬಕ್ಕೆ ಮರಣ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಲಾಗುವುದು ಎಂದು ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಕಾರ್ಮಿಕ ಪರಿಹಾರ ನಿಧಿಯಿಂದ ಮೃತ ಮಹೇಶ್ ಗೌಡರ ಕುಟುಂಬಕ್ಕೆ ಅವರ ಸೇವಾವಧಿ ಆಧಾರದ ಮೇಲೆ 10 ಲಕ್ಷ ರೂಪಾಯಿ ಪರಿಹಾರವನ್ನು ಬೆಸ್ಕಾಂ ನೀಡಲಿದ್ದು, ಈ ಸಂಬಂಧ ಪೂರಕ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಅನುಕಂಪದ ಆಧಾರದ ಅಡಿಯಲ್ಲಿ ಅವರ ಪತ್ನಿಗೆ ಬೆಸ್ಕಾಂನಲ್ಲಿ ʼಡಿʼ ಗ್ರೂಪ್ ನೌಕರಿ ನೀಡಲಾಗುದು ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ನಿಂದ ವಯಕ್ತಿಕ ಅಪಘಾತ ಗುಂಪು ವಿಮಾ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ.
ಇದನ್ನೂ ಓದಿ: ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ.. ಉತ್ತರ ಕರ್ನಾಟಕಕ್ಕೂ ಮುನ್ಸೂಚನೆ