ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ನೋಂದಣಿ ಜನ ಸ್ನೇಹಿ ವಿದ್ಯುತ್ ಸೇವೆಗಳು ಸೇರಿದಂತೆ ಹಲವು ವಿದ್ಯುತ್ ಸೇವೆಗಾಗಿ ರೂಪಿಸಲಾಗಿರುವ ಆರ್‌ಎಪಿಡಿಆರ್‌ಪಿ ತಂತ್ರಾಂಶದಲ್ಲಿ ನ್ಯೂನತೆ ಕಂಡು ಬಂದ ಹಿನ್ನೆಲೆಯಲ್ಲಿ ಸರಿಪಡಿಸಲಾಗಿದೆ. ರಾಜ್ಯದ 5 ಎಸ್ಕಾಂಗಳ ಗ್ರಾಹಕರಿಗೆ 24 ಗಂಟೆಯೂ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಬೆಸ್ಕಾಂ ತಿಳಿಸಿದೆ.
ಜುಲೈ 2022 ರಲ್ಲಿ ಹಾರ್ಡ್‌ವೇರ್‌ದಲ್ಲಿ ಕಂಡು ಬಂದಿದ್ದ ದೋಷದಿಂದಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಾಫ್ಟ್ವೇರ್ ನಿರ್ವಹಣೆಗೆ ಅಡಚಣೆವುಂಟಾಗಿತ್ತು. ಈ ಸಂದರ್ಭದಲ್ಲಿ ಗ್ರಾಹಕರು ವೆಬ್ ಪೋರ್ಟ್ ಲ್ ಗೆ ಲಾಗಿನ್ ಆಗಲು, ಬೆಸ್ಕಾಂ ವ್ಯಾಪ್ತಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರ ವರೆಗೆ ಮತ್ತು ಇತರ ಎಸ್ಕಾಂಗಳಿಗೆ ಮಧ್ಯಾಹ್ನ 1.30 ರಿಂದ ಸಂಜೆ 7ರವರೆಗೆ ಸಮಯ ನಿಗದಿ ಪಡಿಸಲಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಆರ್‌ಎಪಿಡಿಆರ್‌ಪಿ ವೆಬ್ ಸಿದ್ಧ: ಕೆಲವು ಹೆಚ್ಚುವರಿ ಸರ್ವರ್ಗಳು ಮತ್ತು ತಂತ್ರಾಂಶಗಳ ಉನ್ನತೀಕರಣದೊಂದಿಗೆ 24 ಗಂಟೆಗಳ ನಿರಂತರ ಸೇವೆಗೆ ಆರ್‌ಎಪಿಡಿಆರ್‌ಪಿ ವೆಬ್ ಅಪ್ಲಿಕೇಷನ್ ಅನ್ನು ಸಿದ್ದಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
12 ವರ್ಷಗಳ ಹಳೆಯ ತಂತ್ರಾಂಶ: ಆರ್‌ಎಪಿಡಿಆರ್‌ಪಿ ( ಪುನರ್ ರಚಿಸಿದ ವೇಗವರ್ದಿತ ವಿದ್ಯುತ್ ಅಭಿವೃದ್ದಿ ಮತ್ತು ಸುಧಾರಣಾ ಕ್ರಮಗಳು) ತಂತ್ರಾಂಶ 12 ವರ್ಷಗಳ ಹಳೆಯದಾಗಿದ್ದು, ಗ್ರಾಹಕರು ಸರ್ವರ್ ಗೆ ಒಮ್ಮೆಲೆ ಲಾಗಿನ್ ಆದ ಸಂದರ್ಭದಲ್ಲಿ ಮಾತ್ರ ಅಡಚಣೆ ಉಂಟಾಗುತ್ತಿದೆ. ಅದನ್ನು ಸರಿಪಡಿಸಲು ಬೆಸ್ಕಾಂ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.
ಇನ್ಫೋಸಿಸ್ 12 ವರ್ಷದಿಂದ ಕಾರ್ಯ: 12 ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆ ಈ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ಕಾರಣಾಂತರಗಳಿಂದ ಹಿಂದೆ ಸರಿದಿರುವುದರಿಂದ ಹೊಸದಾಗಿ ಕೆಟಿಪಿಪಿ ಕಾಯ್ದೆನ್ವಯ ಟೆಂಡರ್ ಕರೆದು ಆಯ್ಕೆಯಾದ ಇನ್‌ಫೈನೈಟ್ ಕಂಪ್ಯೂಟರ್ ಸಲ್ಯೂಷನ್ಸ್ ಕಂಪನಿಗೆ ಕಾರ್ಯಾದೇಶ ನೀಡಿ ತಂತ್ರಾಂಶ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊಸ ತಂತ್ರಾಂಶ : ಸದ್ಯ ಕಾರ್ಯನಿರ್ವಹಿಸುತ್ತಿರುವ ತಂತ್ರಾಂಶದ ಲೋಪದೋಷಗಳನ್ನು ಶಾಶ್ವತವಾಗಿ ಬಗೆಹರಿಸಲು ಹೊಸ ತಂತ್ರಾಂಶ ಸಿದ್ದಪಡಿಸಲಾಗುತ್ತಿದ್ದು, ಇನ್ನು 4 ರಿಂದ 5 ತಿಂಗಳಲ್ಲಿ ಹೊಸ ತಂತ್ರಾಂಶ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಅನುಮತಿ ಇಲ್ಲದೇ ರಸ್ತೆ ಅಗೆದ ಟೆಲಿಕಾಂ ಕಂಪನಿಗಳು; ಪಾಲಿಕೆಯಿಂದ 25 ಲಕ್ಷ ರೂಪಾಯಿ ದಂಡ..