ಬೆಂಗಳೂರು: ಬೆಸ್ಕಾಂನಲ್ಲಿ ಮಾಪನ ಓದುಗ, ಕಿರಿಯ ಸಹಾಯಕರ ಹುದ್ದೆಗೆ ನೇರ ಸಂದರ್ಶನಕ್ಕೆ ಹಾಜರಾಗಲು ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಹೆಸರಿನ ಲೆಟರ್ ಹೆಡ್ನಲ್ಲಿ ನಕಲಿ ನೇಮಕ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಅಭ್ಯರ್ಥಿಗಳಿಗೆ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ವಂಚನೆ ವಿರುದ್ಧ ಬೆಸ್ಕಾಂ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸೂಚನೆಯ ಮೇರೆಗೆ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ) ಸಿ.ಎನ್. ಮಂಜುನಾಥ್ ಅವರು ನಕಲಿ ಪ್ರಮಾಣ ಪತ್ರ ವಿತರಣೆಯ ವಿರುದ್ಧ ದೂರು ನೀಡಿದ್ದಾರೆ. ಇದುವರೆಗೆ 5 ಪ್ರಕರಣಗಳು ಬೆಸ್ಕಾಂ ಗಮನಕ್ಕೆ ಬಂದಿವೆ. ಅಧಿಕೃತ ಜ್ಞಾಪನಾಪತ್ರ ಅಥವಾ ಸುತ್ತೋಲೆ ಎಂಬ ನಕಲಿ ನೇಮಕ ಆದೇಶಗಳನ್ನು ವಿದ್ಯುತ್ ಸರಬರಾಜು ಕಂಪನಿ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಹೆಸರಿನಲ್ಲಿ ಹಲವು ಉದ್ಯೋಗ ಆಕಾಂಕ್ಷಿ ವ್ಯಕ್ತಿಗಳಿಗೆ ಕಳುಹಿಸಿ ವ್ಯವಸ್ಥಿತವಾಗಿ ವಂಚಿಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ: ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಅಭ್ಯರ್ಥಿ
ಬೆಸ್ಕಾಂ ಮತ್ತು ಕೆಪಿಟಿಸಿಎಲ್ನಿಂದ ಉದ್ಯೋಗ ಆಕಾಂಕ್ಷಿಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸುತ್ತೋಲೆಗಳನ್ನು ಕಳುಹಿಸುವುದಿಲ್ಲ. ಇದೊಂದು ಉದ್ಯೋಗ ವಂಚನೆಯ ಜಾಲವಾಗಿದ್ದು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಹೆಸರಿನಲ್ಲಿ ನಿರುದ್ಯೋಗಿ ಯುವಕ - ಯುವತಿಯರನ್ನು ವಂಚಿಸಿ ಹಣ ಪಡೆಯಲಾಗುತ್ತಿದೆ. ಕಂಪನಿಗೆ ಕೆಟ್ಟ ಹೆಸರು ತರುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಪ್ರಧಾನ ವ್ಯವಸ್ಥಾಪಕರು ದೂರಿದ್ದಾರೆ. ನಕಲಿ ನೇಮಕ ಪ್ರಮಾಣ ಪತ್ರ ಹಂಚಿ ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸುತ್ತಿರುವ ಜಾಲವನ್ನು ಪತ್ತೆ ಹಚ್ಚಿ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬೆಸ್ಕಾಂ ದೂರಿನಲ್ಲಿ ಕೋರಿದೆ.
ವಂಚನೆಯ ವಿವರ: ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಹೆಸರಿನ ಲೆಟರ್ ಹೆಡ್ನಲ್ಲಿ ಅಭ್ಯರ್ಥಿಗಳಿಗೆ ನೇರ ನೇಮಕಾತಿಯ ಸುತ್ತೋಲೆಯನ್ನು ಕಳುಹಿಸಲಾಗುತ್ತಿದೆ. ಮಾಪನ ಓದುಗ ಮತ್ತು ಕಿರಿಯ ಸಹಾಯಕರ ಹುದ್ದೆಗೆ ನೇಮಕ ಮಾಡಲು ಬೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು, ಅಧೀಕ್ಷಕ ಇಂಜಿನಿಯರ್ ಅವರು ಸಹಿ ಮಾಡಿದ ರೀತಿಯಲ್ಲಿ, ನಕಲಿ ನೇಮಕ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ ಅವುಗಳನ್ನು ವಾಟ್ಸ್ಆ್ಯಪ್ ಮೂಲಕ ಅಭ್ಯರ್ಥಿಗಳಿಗೆ ರವಾನಿಸಲಾಗಿದೆ.
ಈಗಾಗಲೇ ಮಾಪಕ ಓದುಗ ಮತ್ತು ಕಿರಿಯ ಸಹಾಯಕ ಹುದ್ದೆಗೆ ನಕಲಿ ನೇಮಕ ಆದೇಶಗಳನ್ನು ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳಾದ ನಾಗೇಶ್, ಆರ್. ಕೆ. ಸಿದ್ದೇಶ, ಎ. ಅನು, ಹೆಚ್. ಟಿ. ದಿವ್ಯಾ ಹಾಗೂ ಜಿ.ಎಸ್. ಸುಹಾಸ್ ಎಂಬುವರಿಗೆ ಕಳುಹಿಸಿ ಕೊಡಲಾಗಿದೆ. 4 ಪ್ರಕರಣಗಳಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಾರ್ಚ್ 17, 2023 ರಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಸುಹಾಸ್ ಎನ್ನುವರಿಗೆ ಕಿರಿಯ ಸಹಾಯಕ ಹುದ್ದೆಗೆ ನಕಲಿ ನೇಮಕ ಆದೇಶ ನೀಡಿರುವ ಪ್ರಕರಣದ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಲಾಗಿದೆ.
ಇದನ್ನೂ ಓದಿ: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್, ಮೋದಿ, ಯೋಗಿ ಸೇರಿ 40 ಮಂದಿಗೆ ಅವಕಾಶ: ಪಟ್ಟಿಯಲ್ಲಿಲ್ಲ ಕಿಚ್ಚ ಸುದೀಪ್ ಹೆಸರು