ಬೆಂಗಳೂರು: ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಬುಧವಾರ ಬೆಳಗ್ಗೆ ಹೊರಬರುವುದು ನಿಗದಿಯಾಗುತ್ತಿದ್ದಂತೆಯೇ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ.
ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಹಾಜರಿದ್ದು, ವಿಶ್ವಾಸಮತ ಯಾಚನೆಯ ನಿರ್ಣಯದ ಪರವಾಗಿ ಮತ ಚಲಾಯಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಭಯ ಪಕ್ಷಗಳ ಶಾಸಕಾಂಗ ನಾಯಕರು ವಿಪ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದರೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.
ಶಾಸಕರ ಮನೆ, ಎಲ್.ಹೆಚ್.ನಲ್ಲಿರುವ ಶಾಸಕರ ಕೊಠಡಿ ಸೇರಿದಂತೆ ಶಾಸಕರು ಎಲ್ಲಿ ಲಭ್ಯವಿರುತ್ತಾರೆ ಎಂಬ ಮಾಹಿತಿ ಇದೆಯೋ? ಅಲ್ಲಿಗೆ ಹೋಗಿ ವಿಪ್ ತಲುಪಿಸಲಾಗಿದೆ. ಸಿಗದ ಶಾಸಕರ ಮನೆ ಮತ್ತು ಎಲ್.ಹೆಚ್.ನ ಕೊಠಡಿಗಳಿಗೆ ವಿಪ್ ಪ್ರತಿ ಅಂಟಿಸಿ ಬರಲಾಗಿದೆ. ಹೀಗೆ ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ಶಾಸಕರಿಗೆ ವಿಪ್ ಬಾಂಬ್ ಜಾರಿಯಾಗಿದ್ದು ಇದು ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ? ಎಂಬುದು ಬುಧವಾರ ಬೆಳಗ್ಗೆ ಪ್ರಕಟವಾಗಲಿರುವ ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಖಚಿತವಾಗಲಿದೆ.
ಒಂದು ವೇಳೆ, ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಸುಪ್ರೀಂಕೋರ್ಟ್ ಹೇಳಿದರೆ ಇದಕ್ಕೆ ಪರ್ಯಾಯವಾಗಿ ವಿಶ್ವಾಸಮತ ಯಾಚನೆಯ ಸಂದರ್ಭವನ್ನು ಬಳಸಿಕೊಂಡು ಅವರನ್ನು ಅನರ್ಹಗೊಳಿಸಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಆದರೆ, ಯಾವ ಕಾರಣಕ್ಕೂ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದರೆ ಏನು ಮಾಡಬೇಕು? ಎನ್ನುವ ಕುರಿತು ಇಂದು ಉಭಯ ಪಕ್ಷಗಳ ನಾಯಕರು ಸುಧೀರ್ಘ ಚರ್ಚೆ ನಡೆಸಿದರು.