ಬೆಂಗಳೂರು: ನಾಳೆಯಿಂದ ಬೆಂಗಳೂರು ಲಾಕ್‌ಡೌನ್ ಮುಕ್ತಾಯಗೊಳ್ಳಲಿದ್ದು, ಜೂನ್ 30ರಂದು ಜಾರಿಗೆ ತಂದಿರುವ ಅನ್ಲಾಕ್ 2.O ಮಾರ್ಗಸೂಚಿಗಳು ಮುಂದುವರಿಯಲಿದೆ. ಈ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ಜುಲೈ 22ರ ಬೆಳಗ್ಗೆಯಿಂದ ಜುಲೈ 31ರವರೆಗೆ ಅನ್ವಯವಾಗುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ಪ್ರದೇಶದಲ್ಲಿ ಅನ್ಲಾಕ್ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಅದರಂತೆ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಈ ಮುಂಚೆ ಇದ್ದಂತೆ ಎಲ್ಲ ಚಟುವಟಿಕೆಗಳಿಕೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಅನ್ಲಾಕ್ 2.0 ಮಾರ್ಗಸೂಚಿ ಏನು?
ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಮತ್ತೆ 9.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಪರಿಷ್ಕರಿಸಲಾಗಿದೆ. ಈ ಮುಂಚೆ ರಾಜ್ಯ ಸರ್ಕಾರ ರಾತ್ರಿ 8 ಗಂಟೆಯಿಂದ ರಾತ್ರಿ ಕರ್ಫ್ಯೂ ಹೇರಿತ್ತು. ಸದ್ಯ ಚಾಲ್ತಿಯಲ್ಲಿರುವ ಪ್ರತಿ ಭಾನುವಾರದ ಲಾಕ್‌ಡೌನ್ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ಜನಸಂದಣಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಗಳನ್ನು ಬೆಂಗಳೂರು ಮಾತ್ರವಲ್ಲದೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಪಿಎಂಸಿ ಅಥವಾ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಉದ್ಯಾನವನಗಳಲ್ಲಿ ಜಿಮ್ ಸಲಕರಣೆಗಳು ಮತ್ತು ಕುಳಿತುಕೊಳ್ಳುವ ಬೆಂಚ್ಗಳ ಬಳಸುವಿಕೆಯನ್ನು ನಿಷೇಧಿಸಲಾಗಿದೆ.