ಬೆಂಗಳೂರು: ಹಿಟ್ ಅಂಡ್ ರನ್ ಪ್ರಕರಣಗಳು ದೇಶದ ಅಲ್ಲಲ್ಲಿ ವರದಿಯಾಗುತ್ತಿವೆ. ಹೊಸವರ್ಷದಂದು ದೆಹಲಿಯ ಕಾಂಜಾವಾಲ ಎಂಬಲ್ಲಿ ಮತ್ತು ಸಂಕ್ರಾಂತಿಯಂದು ಪಂಜಾಬ್ನಲ್ಲಿ ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ವೇಳೆ ಗುದ್ದಿ ಪರಾರಿಯಾದ ಘಟನೆ ನಡೆದಿತ್ತು. ಇಂದು ಬೆಂಗಳೂರಿನಲ್ಲಿ ಅಂತಹುದ್ದೇ ಒಂದು ಪ್ರಕರಣ ನಡೆದಿದ್ದು, ಅಪಘಾತ ಮಾಡಿ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದವನನ್ನು ಹಿಡಿಯಲು ಹೋಗಿದ್ದ ಕಾರಿನ ಚಾಲಕನನ್ನು ಸುಮಾರು ಒಂದು ಕೀಮೀ ಎಳೆದುಕೊಂಡು ಹೋಗಲಾಗಿದೆ.
ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತವಾಗಿದೆ. ಅಪಘಾತದ ನಂತರ ಗುದ್ದಿದ ಬೈಕ್ ಸವಾರ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಆಗ ಆತನನ್ನು ಹಿಡಿಯಲು ಪ್ರಯತ್ನಿಸಿದ ಕಾರಿನ ಚಾಲಕನನ್ನು ಬೈಕ್ನಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೂ ಎಳೆದು ಕೊಂಡು ಹೋಗಿದ್ದಾನೆ. ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್ ಸವಾರ ಕಾರಿಗೆ ಗುದ್ದಿದ್ದಾನೆ. ಕಾರಿನ ಚಾಲಕ ಬೈಕ್ ಸವಾರನನ್ನು ಪ್ರಶ್ನಿಸಿದ್ದಾನೆ. ಈ ವೇಳೆ, ಬೈಕ್ ಸವಾರ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾನೆ. ಆಗ ಕಾರಿನ ಡ್ರೈವರ್ ಬೈಕ್ನ ಹಿಂದಿನ ಹಿಡಿಕೆ ಹಿಡಿದು ತಡೆಯಲು ಪ್ರಯತ್ನಿಸಿದಾಗ ಆತನನ್ನು ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದ ವರೆಗೆ ದರ ದರನೆ ಎಳೆದೊಯ್ದಿದ್ದಾನೆ. ವಯಸ್ಸಾದ ಚಾಲಕನನ್ನು ಬೈಕ್ನಲ್ಲಿ ಎಳೆದೊಯ್ತುತ್ತಿರುವುದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ.
ವಾಹನ ಸವಾರರು ಬೈಕ್ ಚಲಾಯಿಸುತ್ತಿದ್ದವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ವಾಹನ ಸವಾರರು ಬೈಕ್ ಸವಾರನಿಗೆ ಹಿಗ್ಗಾ ಮುಗ್ಗಾ ತಳಿಸಿದ್ದಾರೆ. ವಿಜಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬೈಕಿನ ಹಿಂದೆ ನೇತುಬಿದ್ದು ಒಂದು ಕಿಲೋಮೀಟರ್ ಎಳೆದೊಯ್ಯಲ್ಪಟ್ಟ ಕಾರಿನ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಂದು ಕಡೆ ವಾಹನ ಸವಾರರಿಂದ ಧರ್ಮದೇಟು ತಿಂದ ಬೈಕ್ ಸವಾರನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯನಗರ ಸಂಚಾರ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇಶದಲ್ಲಿ ಮರುಕಳಿಸುತ್ತಿರುವ ಹಿಟ್ ಅಂಡ್ ರನ್ ಕೇಸ್: ಸಂಕ್ರಾಂತಿಯಂದು ಶನಿವಾರ ಪಂಜಾಬ್ನಲ್ಲಿ ಇಂತಹದ್ದೇ ಒಂದು ಪ್ರಕರಣ ನಡೆದಿತ್ತು. ರಸ್ತೆ ಬದಿಯಲ್ಲಿ ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ 25 ವರ್ಷದ ಯುವತಿಗೆ ಥಾರ್ ಜೀಪ್ನಲ್ಲಿ ಗುದ್ದಿ ಪರಾರಿಯಾಗಿದ್ದರು. ಎಸ್ಯುವಿ ಗುದ್ದಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿರುವುದರ ಆಧಾರ ಸಹಾ ದೊರೆತಿತ್ತು. 25 ವರ್ಷದ ತೇಜಶ್ವಿತಾ ಮತ್ತು ಅವರ ತಾಯಿ ಎಂದಿನಂತೆ ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು.
ಈ ವೇಳೆ, ವೇಗವಾಗಿ ಬಂದ ವಾಹನ ಅವರಿಗೆ ಗುದ್ದಿತ್ತು. ಆಕೆಯನ್ನು ಪೊಲೀಸ್ ಕಂಟ್ರೋಲ್ ರೂಮ್ನ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಆಕೆ ಚೇತರಿಸಿ ಕೊಳ್ಳುತ್ತಿದ್ದಾಳೆ. ಆದರೆ ಇನ್ನೂ ಗುದ್ದಿದವನ ಮಾಹಿತಿ ಪೊಲೀಸರು ಹುಡುಕುತ್ತಿದ್ದಾರೆ.
ಕಾಂಜಾವಾಲಾ ಪ್ರಕರಣ: ದೆಹಲಿಯಲ್ಲಿ ಡಿಸೆಂಬರ್ 31ರಂದು ಕುಡಿದ ಮತ್ತಿನಲ್ಲಿದ್ದವರು ಕಾಂಜಾವಾಲಾ ಎಂಬಲ್ಲಿ 4 ಕಿಲೋ ಮೀಟರ್‌ಗಳವರೆಗೆ ಎಳೆದೊಯ್ದು ಪ್ರಕರಣ ಇಡೀ ದೇಶದಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು. ರಾತ್ರಿ ವೇಳೆ ಕಾರು ಸ್ಕೂಟಿಗೆ ಗುದ್ದಿದೆ. ಸ್ಕೂಟಿಯಲ್ಲಿದ್ದ ಯುವತಿ ಕಾರಿನ ಚಕ್ರಕ್ಕೆ ಸಿಲುಕಿದ್ದರು. ಕಾರಿನಲ್ಲಿದ್ದವರು ಪಾರ್ಟಿ ಗುಂಗಿನಲ್ಲಿ ಮತ್ತು ಎಣ್ಣೆ ನಶೆಯಲ್ಲಿ ಇದ್ದಿದ್ದರಿಂದ ಅವರಿಗೆ ಇದರ ಅರಿವೇ ಆಗಿಲ್ಲ. ಕಾರಿಗೆ ಸಿಲುಕಿದ ಯುವತಿ ಮೃತಪಟ್ಟಿದ್ದರು. ಇದು ಕಾಂಜಾವಾಲಾ ಪ್ರದೇಶದಲ್ಲಿ ನಡೆದಿದೆ. ಹೀಗಾಗಿ ಇದನ್ನು ಕಾಂಜಾವಾಲಾ ಎಂದೇ ಕರೆಯಲಾಗುತ್ತಿದೆ.
ಹೊಸ ವರ್ಷ ಆಚರಣೆಯ ಹೊಸ್ತಿಲಲ್ಲೇ ಯುವತಿಯೊಬ್ಬಳನ್ನು ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಲಾಗುತ್ತಿದೆ ಎಂದು ಬೆಳಗಿನ ಜಾವ 3.24ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಅಲ್ಲಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕರೆ ಮಾಡಿದವರ ಮೊಬೈಲ್ ಸಂಖ್ಯೆಗೆ ಕಾಂಜಾವಾಲಾ ಪೊಲೀಸ್ ಠಾಣೆಯ ತಂಡ ನಿರಂತರವಾಗಿ ಸಂಪರ್ಕಿಸಿತ್ತು. ಇದಾದ ನಂತರ ಯುವತಿಯನ್ನು ಎಳೆದೊಯ್ದುತ್ತಿದ್ದ ಕಾರಿನ ಗುರುತು ಪತ್ತೆಮಾಡಿ ಪೊಲೀಸರು ದೀಪಕ್ ಖನ್ನಾ, ಅಮಿತ್ ಖನ್ನಾ, ಕ್ರಿಶನ್, ಮಿತ್ತು ಹಾಗೂ ಮನೋಜ್ ಮಿತ್ತಲ್ ಐವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಯುವತಿಗೆ ಗುದ್ದಿದ ಎಸ್ಯುವಿ: ಕಾಂಜಾವಾಲಾ ಪ್ರಕರಣ ನೆನಪಿಸಿದ ಘಟನೆ