ಬೆಂಗಳೂರು: ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಟೆಕ್ ಶೃಂಗಸಭೆಯನ್ನು (ಬಿಟಿಎಸ್) ನವೆಂಬರ್ಗೆ ಮುಂದೂಡಲಾಗಿದೆ. ನವೆಂಬರ್ 18ರಿಂದ 20ರವರೆಗೆ ಸಭೆ ನಡೆಯಲಿದೆ.
ಐಟಿ - ಬಿಟಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎಸ್.ಅಶ್ವತ್ಥ್ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 21ರಿಂದ 23ರವರೆಗೆ ಬೆಂಗಳೂರು ಟೆಕ್ ಶೃಂಗಸಭೆ ನಡೆಸಲು ಈ ಹಿಂದೆ ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್-19 ಹಿನ್ನೆಲೆ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಗುವ ಕಾರಣ ಮುಂದೂಡಲಾಗಿದೆ ಎಂದು ಡಾ. ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದರು.
ಈ ವರ್ಷದ ಶೃಂಗಸಭೆ ಹಲವಾರು ದೃಷ್ಟಿಕೋನಗಳಿಂದ ವಿಶೇಷವಾಗಲಿದೆ. ಏಕೆಂದರೆ ಕೋವಿಡ್-19 ಸವಾಲುಗಳನ್ನು ಎದುರಿಸಲು ತಂತ್ರಜ್ಞಾನವನ್ನು ಉಪಯೋಗಿಸುವ ಕುರಿತು ಗಮನ ಹರಿಸಲಿದೆ. ತಜ್ಞರು ಮತ್ತು ತಂತ್ರಜ್ಞರಿಂದ ವಿಚಾರ ಸಂಕಿರಣಗಳು ಮತ್ತು ತಂತ್ರಜ್ಞಾನ ಸಂಬಂಧಿತ ಮಾತುಕತೆ ನಡೆಯಲಿದೆ.