ಬೆಂಗಳೂರು: ಕೊರೊನಾ ಸೋಂಕನ್ನು ತಡೆಯಲು ಪ್ರತಿ ಭಾನುವಾರ ಲಾಕ್ ಡೌನ್ ಹೇರಲಾಗ್ತಿದೆ. ಸದ್ಯ ಬೆಂಗಳೂರು ನಗರ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಇಲ್ಲ.
ನಾಳೆ ಬೆಳಗ್ಗೆ 5 ಗಂಟೆಯವರೆಗೆ ನಗರ ಸಂಪೂರ್ಣವಾಗಿ ಸ್ತಬ್ಧವಾಗಿರಲಿದೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನ ಹಾಕಿದ್ದು, ಅನಗತ್ಯವಾಗಿ ಸಂಚರಿಸುವವರ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗೆ ವಾಹನಗಳು ಇಳಿದರೆ ಪೊಲೀಸರು ಜಪ್ತಿ ಮಾಡಲು ಮುಂದಾಗಿದ್ದಾರೆ.
ಇದರ ಜೊತೆಗೆ ಅಗತ್ಯ ಸೇವೆಗೆಂದು ಹೊರ ಬರುವವರು ಮಾಸ್ಕ್ ಹಾಕದೇ ಇದ್ದರೆ ದಂಡ ವಿಧಿಸಲಾಗುತ್ತಿದೆ. ಸದ್ಯ ಹಾಲು, ಮಾಂಸ, ಪೇಪರ್, ತರಕಾರಿ ಖರೀದಿಗೆ ಅವಕಾಶವಿದೆ. ಅಗತ್ಯ ಸರಕು ವಾಹನ ಬಿಟ್ಟರೆ ಆಟೋ, ಬೈಕ್, ಬಿಎಂಟಿಸಿ ಕೂಡ ಸ್ಥಗಿತವಾಗಿದೆ.
ಮತ್ತೊಂದೆಡೆ ಪೊಲೀಸರಿಗೆ ಕೊರೊನಾ ಸೋಂಕು ವಕ್ಕರಿಸಿದ್ದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ. ಹೀಗಾಗಿ ಆಸಕ್ತಿ ಇರುವ ಸಾರ್ವಜನಿಕರಿಗೆ ಸಿವಿಲ್ ಪೊಲೀಸ್ ಆಗುವ ಅವಕಾಶ ನೀಡಲಾಗಿತ್ತು. ಇವರು ಭಾನುವಾರದ ಲಾಕ್ ಡೌನ್ಗೆ ಸಹಕಾರ ನೀಡಲಿದ್ದಾರೆ ಎಂದು ತಿಳಿದುಬಂದಿದೆ.